ಮೈಸೂರು: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆಯು ನಗರವನ್ನು ಸ್ವಚ್ಛಗೊಳಿಸಲು “80 ತ್ಯಾಜ್ಯಮುಕ್ತ ತಾಣಗಳು” ಎಂಬ ವಿಶೇಷ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದೆ.
ಈ ಅಭಿಯಾನದಡಿ ನಗರದ 9 ವಲಯಗಳಲ್ಲಿ ತ್ಯಾಜ್ಯ ಸುರಿಯಲಾಗುತ್ತಿರುವ 80 ದುರ್ಬಲ ತಾಣಗಳನ್ನು – Garbage Vulnerable Points ಗಳನ್ನು ಗುರುತಿಸಲಾಗಿದೆ.
ಈ ತಾಣಗಳನ್ನು ಹಂತ ಹಂತವಾಗಿ ಸ್ವಚ್ಛಗೊಳಿಸಿ, ಅಗತ್ಯಕ್ಕೆ ಅನುಗುಣವಾಗಿ ಸುಂದರಿಸಲಾಗುವುದು. ಅಲ್ಲದೆ,ಈ ತಾಣಗಳಲ್ಲಿ ಪುನಃ ತ್ಯಾಜ್ಯ ಸುರಿಯದಂತೆ ನಿರಂತರ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಉದ್ದೇಶಿಸಿದೆ.
ಅಭಿಯಾನದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಪಾಲುದಾರ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಸ್ವಯಂಸೇವಾ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಶಿಕ್ಷಣ ಸಂಸ್ಥೆಗಳು, ವ್ಯಾಪಾರಿ ಸಂಘಗಳು, ನಾಗರಿಕ ಸಂಘಟನೆಗಳು ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಅಭಿಯಾನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಅಭಿಯಾನದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.
ಮೊದಲ ಹಂತದ ಸ್ವಚ್ಛತೆ ಜು.28 ರಂದು
ಅಭಿಯಾನದ ಮೊದಲ ಹಂತವಾಗಿ, ಚಾಮರಾಜ ಜೋಡಿ ರಸ್ತೆಯ ಫ್ರೀಡಂ ಪಾರ್ಕ್ ಸಮೀಪದಲ್ಲಿರುವ ತ್ಯಾಜ್ಯ ಬೀಳುವ ದುರ್ಬಲ ತಾಣವನ್ನು ದಿನಾಂಕ 28-07-2026 ರಂದು ಬೆಳಿಗ್ಗೆ 6.30ಕ್ಕೆ ಸ್ವಚ್ಛಗೊಳಿಸಿ, ತ್ಯಾಜ್ಯಮುಕ್ತ ತಾಣವನ್ನಾಗಿ ಪರಿವರ್ತಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನಗರದ ಸಾರ್ವಜನಿಕರು, ಸಂಘ-ಸಂಸ್ಥೆಗಳು, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯದೇ ನಿಗದಿತ ವ್ಯವಸ್ಥೆಯ ಮೂಲಕ ವಿಲೇವಾರಿ ಮಾಡಿ ಮೈಸೂರನ್ನು ಸ್ವಚ್ಛ, ಸುಂದರ ಮತ್ತು ತ್ಯಾಜ್ಯಮುಕ್ತ ನಗರವನ್ನಾಗಿಸುವ ಕಾರ್ಯಕ್ಕೆ ಸಹಕರಿಸುವಂತೆ ಮೈಸೂರು ಮಹಾನಗರ ಪಾಲಿಕೆ ಮನವಿ ಮಾಡಿದೆ.
