ಮೈಸೂರು: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಣೆ ಮಾಡುತ್ತಿದ್ದ ಕ್ಯಾಂಟರ್ ಮತ್ತು ಚಾಲಕನನ್ನು ಕೆ.ಆರ್ ನಗರದ
ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಹಾಸನ ರಸ್ತೆ ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕ್ಯಾಂಟರ್ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಮೈಸೂರು ದಕ್ಷಿಣ ವಲಯ ಡಿವೈಎಸ್ಪಿ ಟಿ.ಬಿ..ರಾಜಣ್ಣ ನೇತೃತ್ವದಲ್ಲಿ ಪೊಲೀಸರು ಕೆ.ಆರ್ ನಗರದ ವೆಂಕಟೇಶ್ವರ ಚಿತ್ರಮಂದಿರದ ಬಳಿ ದಾಳಿ ನಡೆಸಿದರು.
ಈ ವೇಳೆ ಪೊಲೀಸರು ಲಾರಿ ಹಾಗೂ 98 ಮೂಟೆ 46 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಚಾಲಕ ಮಹಮ್ಮದ್ ಸಜ್ಜದ್ನನ್ನು ವಶಕ್ಕೆ ಪಡೆದಿದ್ದಾರೆ.
ಗೋಡೌನ್ನಿಂದ ಅಕ್ಕಿ ತೆಗೆದುಕೊಂಡು ಯಾವುದೇ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ಲಾರಿಯನ್ನು ತಡೆದು ವರಿಶೀಲಿಸಿದರು.
ಈ ಸಂಬಂಧ ಆಹಾರ ಇಲಾಖೆ ನಿರೀಕ್ಷಕರಾದ ಕುಮಾರ್ ಮತ್ತು ಸುರೇಶ್ ಕೆ.ಆರ್.ನಗರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಶಿವ ಪ್ರಕಾಶ್ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
ವಶಕ್ಕೆ ಪಡೆಯಲಾಗಿರುವ ಪಡಿತರ ಅಕ್ಕಿ ಆಹಾರ ನಿಗಮದ ಗೋಡೌನ್ನಿಂದ ಬಂದಿರುವ ಅಕ್ಕಿಯಾದರೂ ಅದು ಪಡಿತರ, ಬಿಸಿಯೂಟ, ಹಾಸ್ಟೆಲ್ ಅಥವಾ ಖಾಸಗಿಯವರು ಖರೀದಿಸುವ ಅಕ್ಕಿಯೇ ಎಂಬುದು ಇನ್ನೂ ಖಚಿತವಾಗಿಲ್ಲ.
ತನಿಖೆ ನಡೆಸಿದ ನಂತರ ಅಕ್ಕಿ ಯಾವ ಗೋಡೌನ್ನಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆವಿಗೆ ಮೂರನೇ ಘಟನೆ ಪಟ್ಟಣದಲ್ಲಿ ಈ ಪ್ರಕರಣ ಸೇರಿದಂತೆ ಮೂರು ಬಾರಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಹಾಗೂ ಅಕ್ರಮವಾಗಿ ಶೇಖರಣೆ ಮಾಡಿದ್ದಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಪದೇ,ಪದೇ ಪಡಿತರ ಅಕ್ಕಿ ಕಳ್ಳಸಾಗಣೆ ನಡೆಯುತ್ತಿದ್ದು ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಇದನ್ನು ಬಯಲಿಗೆ ಎಳೆಯಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
