ಮೈಸೂರು: ಮೈಸೂರು ನಗರದಲ್ಲಿ ಸ್ಪಾ ಹಾಗೂ ಮಸಾಜ್ ಪಾರ್ಲರ್ಗಳ ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕನ್ನಡಾಂಬೆ ರಕ್ಷಣಾ ವೇದಿಕೆ ಪೊಲೀಸ್ ಆಯುಕ್ತರನ್ನು ಆಗ್ರಹಿಸಿದೆ
ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್ ಅವರ ನೇತೃತ್ವದಲ್ಲಿ ಮಹಿಳಾ ಪದಾಧಿಕಾರಿಗಳ ಜೊತೆ ಇಂದು ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಕೆಲವು ಸ್ಪಾ ಹಾಗೂ ಮಸಾಜ್ ಪಾರ್ಲರ್ಗಳ ಹೆಸರಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅನೈತಿಕ ಚಟುವಟಿಕೆಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು.
ಮೈಸೂರು ನಗರವು ತಾಯಿ ಚಾಮುಂಡೇಶ್ವರಿ ನೆಲೆಸಿರುವ ಪುಣ್ಯಭೂಮಿ, ವಿಶ್ವವಿಖ್ಯಾತ ದಸರಾ ಮಹೋತ್ಸವದ ತವರೂರು ಹಾಗೂ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಾಗಿ ಹೆಸರುವಾಸಿಯಾಗಿದೆ. ಇಂತಹ ಪವಿತ್ರ ಹಾಗೂ ಐತಿಹಾಸಿಕ ನಗರದಲ್ಲಿ ಕಾನೂನುಬಾಹಿರ, ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಪ್ರಚೋದನಕಾರಿ ಅಡ್ವಟೈಸ್ ಗಳು, ಯುವ ಪೀಳಿಗೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಈ ವೇಳೆ ರಾಜಶೇಖರ್ ಆತಂಕ ವ್ಯಕ್ತಪಡಿಸಿದರು.
ಯುವಕರ ದಾರಿತಪ್ಪಿಸುವಂತಹ ಘಟನೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬಂದಿದ್ದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ ನಗರದ ಘನತೆಗೆ ಧಕ್ಕೆ ತರುವಂತಾಗಿದೆ ಎಂದು ತಿಳಿಸಿದರು.
ಇದೆಲ್ಲದರ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರದಲ್ಲಿರುವ ಸ್ಪಾ ಹಾಗೂ ಮಸಾಜ್ ಪಾರ್ಲರ್ಗಳ ದಾಖಲೆಗಳು, ಪರವಾನಗಿಗಳು ಮತ್ತು ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಯಾವುದೇ ಒತ್ತಡಕ್ಕೂ ಮಣಿಯದೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಕಾನೂನುಬಾಹಿರ ಅಥವಾ ಅಶ್ಲೀಲ ಸೇವೆಗಳ ಪ್ರಚಾರ ನಡೆಸುವವರ ಮೇಲೂ ಸೈಬರ್ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಕಾನೂನುಬದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಯಾವುದೇ ಸ್ಪಾ ಅಥವಾ ಮಸಾಜ್ ಕೇಂದ್ರಗಳ ವಿರುದ್ಧ ನಮ್ಮ ಸಂಘಟನೆಯ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಮಾತ್ರ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂಬುದು ಸಂಘಟನೆಯ ಆಗ್ರಹವಾಗಿದೆ ಎಂದು ರಾಜಶೇಖರ್ ಹೇಳಿದರು.
ಪೊಲೀಸ್ ಇಲಾಖೆ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ 15 ದಿನಗಳೊಳಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈ ಅವಧಿಯಲ್ಲಿ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿದ್ದರೆ, ಕನ್ನಡಾಂಬೆ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಮೈಸೂರು ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಜಿ ನಂಜುಂಡ, ಡಿಪಿಕೆ ಪರಮೇಶ್,ಮಹಿಳಾ ಘಟಕದ ಅಧ್ಯಕ್ಷರು ತಾರಾ,ಜಿ , ಹರೀಶ್, ಮಹೇಶ್, ಪರ್ವೀನ್ ತಾಜ್, ಶಶಿಕಲಾ , ಚನ್ನನಾಯಕ್ ,ಬಿ.ಆರ್. ಕೇಶವ, ಶಿವಮ್ಮ, ರಾಮಮ್ಮ,ಹಾಜರಿದ್ದರು.
