ಅಥಣಿ: ರೈತನ ಮಗ ಅಪ್ಪಟ ಗ್ರಾಮೀಣ ಸೊಗಡಿನ ಕುವರ ಕಠಿಣ ಪರಿಶ್ರಮ ಮತ್ತು ಛಲದಿಂದ ಐಎಫ್ಎಸ್ನಲ್ಲಿ ದೇಶಕ್ಕೇ ಮೊದಲ ರ್ಯಾಂಕ್ ಪಡೆಯುವ ಮೂಲಕ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕೇಂದ್ರ ಲೋಕಸೇವಾ ಆಯೋಗ ಪ್ರಕಟಿಸಿದ ಭಾರತೀಯ ಅರಣ್ಯ ಸೇವೆ (ಐ ಎಫ್ ಎಸ್) ಪರೀಕ್ಷಾ ಫಲಿತಾಂಶದಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ್ ದರೇಪ್ಪ ಕೆಂಪವಾಡ ಅವರು ಪ್ರಥಮ ರ್ಯಾಂಕ್ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.
ಸಾಮಾನ್ಯ ರೈತ ಕುಟುಂಬದ ಹಿನ್ನೆಲೆಯ ಬಸವರಾಜ್, ಯಾವುದೇ ಪ್ರತಿಷ್ಠಿತ ಕೋಚಿಂಗ್ ಸೆಂಟರ್ಗಳ ನೆರವಿಲ್ಲದ ಈ ಸಾಧನೆ ಮಾಡಿರುವುದು ವಿಶೇಷ. ಎರಡನೇ ಪ್ರಯತ್ನದಲ್ಲಿಯೇ ದೇಶಕ್ಕೆ ಟಾಪರ್ ಆಗಿ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಮಾದರಿಯಾಗಿದ್ದಾರೆ.
ಹುಟ್ಟೂರು ಸವದಿ ಗ್ರಾಮದ ಸರ್ಕಾರಿ ಶಾಲೆಯಲ್ಲೇ ಅಕ್ಷರ ಅಭ್ಯಾಸ ಆರಂಭಿಸಿದ ಬಸವರಾಜ,ಅಥಣಿ ಪಟ್ಟಣದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿದರು.ಶಿರಸಿಯ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದರು. ನಂತರ ಬೆಂಗಳೂರಿನಲ್ಲಿ ಸ್ವಯಂ ಅಧ್ಯಯನದ ಮೂಲಕ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು.
ನಾನು ಒಬ್ಬ ರೈತನ ಮಗನಾಗಿ, ಗ್ರಾಮೀಣ ಪರಿಸರದಲ್ಲಿ ಬೆಳೆದು ಈ ಮಟ್ಟಕ್ಕೆ ತಲುಪಿರುವುದು ಹೆಮ್ಮೆ ತಂದಿದೆ. ಹಿರಿಯರ ಮಾರ್ಗದರ್ಶನ ಹಾಗೂ ನಿರಂತರ ಪ್ರಯತ್ನವೇ ನನ್ನ ಯಶಸ್ಸಿನ ಗುಟ್ಟು. ಯಾವುದೇ ವಿಶೇಷ ತರಬೇತಿಗಿಂತ ಶಿಸ್ತಿನ ಓದು ಮುಖ್ಯ ಎಂದು ಬಸವರಾಜ್ ಕೆಂಪವಾಡ ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.
ಬಸವರಾಜ್ ಅವರ ಸಾಧನೆಯ ಸುದ್ದಿ ತಿಳಿಯುತ್ತಿದ್ದಂತೆ ಸವದಿ ಗ್ರಾಮದ ಜನರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
