ಮೈಸೂರು: ಸಮಾಜಕ್ಕೆ ಅಗತ್ಯವಾದ ಮಾಹಿತಿ ಮತ್ತು ಸುದ್ದಿಗಳನ್ನು ಪ್ರತಿದಿನ ಮನೆಮನೆಗೆ ತಲುಪಿಸುವ ಪತ್ರಿಕಾ ವಿತರಕರ ಸೇವೆ ಅತ್ಯಂತ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದು ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ತಿಳಿಸಿದ್ದಾರೆ.
ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ದೇವರಾಜ ಅರಸು ರಸ್ತೆಯಲ್ಲಿ
ಹಿರಿಯ ಪತ್ರಿಕಾ ವಿತರಕರಾದ
ಕನಕರತ್ನ ,ರಾಘು,ಚಂದ್ರಶೇಖರ್,ಓಂ ದೇವ್ ,ಶ್ರೀಕಾಂತ,ಸತೀಶ್
ಅವರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಪತ್ರಿಕಾ ವಿತರಕರು ಪ್ರತಿದಿನ ಮುಂಜಾನೆ ಎದ್ದು, ಮಳೆ, ಗಾಳಿ, ಚಳಿ ಹಾಗೂ ಬೇಸಿಗೆಯನ್ನು ಲೆಕ್ಕಿಸದೆ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ.
ಸಮಾಜಕ್ಕೆ ನಿಖರವಾದ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವಲ್ಲಿ ಅವರು ಪ್ರಮುಖ ಕೊಂಡಿಯಾಗಿದ್ದಾರೆ,
ಪತ್ರಿಕಾ ವಿತರಕರ ದಿನಾಚರಣೆಯ ಅಂಗವಾಗಿ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಿಕಾ ವಿತರಕರನ್ನು ಸನ್ಮಾನಿಸುವ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಇಂತಹ ಕಾರ್ಯಕ್ರಮಗಳು ಅವರ ಸೇವೆಗೆ ಮತ್ತಷ್ಟು ಪ್ರೋತ್ಸಾಹ ನೀಡಲಿವೆ ಎಂದು ಪ್ರಶಾಂತ್ ಗೌಡ ಹೇಳಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ,
ಇಂದಿನ ಡಿಜಿಟಲ್ ಯುಗದಲ್ಲಿಯೂ ಮುದ್ರಿತ ಪತ್ರಿಕೆಗಳ ಮೇಲಿನ ಜನರ ವಿಶ್ವಾಸ ಮುಂದುವರಿದಿದೆ. ಪತ್ರಿಕೆಗಳನ್ನು ಓದುಗರ ಮನೆಬಾಗಿಲಿಗೆ ತಲುಪಿಸುವ ಪತ್ರಿಕಾ ವಿತರಕರ ಪರಿಶ್ರಮ, ಶಿಸ್ತು ಮತ್ತು ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಕೆ ಬಿ ಲಿಂಗರಾಜು ಮಾತನಾಡಿ,
ಪತ್ರಿಕಾ ವಿತರಕರು ಕೇವಲ ಪತ್ರಿಕೆ ವಿತರಿಸುವ ಕೆಲಸ ಮಾಡುತ್ತಿಲ್ಲ; ಅವರು ಜ್ಞಾನ, ಅರಿವು ಮತ್ತು ಸಾಮಾಜಿಕ ಜಾಗೃತಿಯನ್ನು ಜನರಿಗೆ ತಲುಪಿಸುವ ಮಹತ್ತರ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ದರಿಂದ ಅವರ ಸೇವೆಯನ್ನು ಗುರುತಿಸಿ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಎ ರವಿ, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್,ಕೆ ಎಮ್ ಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಎಚ್ ಜಿ ಗಿರಿಧರ್, ಪ್ರಮೋದ್ ಗೌಡ, ಗುರುರಾಜ್ ಶೆಟ್ಟಿ, ಸಂತೋಷ್ ,ನವೀನ್, ಎಸ್ಎನ್ ರಾಜೇಶ್, ಪ್ರಶಾಂತ್, ಕೇಬಲ್ ಮಹೇಶ್, ದೂರ ರಾಜಣ್ಣ, ಸುಚೇಂದ್ರ ಮತ್ತಿತರರು ಹಾಜರಿದ್ದರು.
