ಮೈಸೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರಕ್ಕೆ ಸೆ.10ಕ್ಕೆ ನೂರು ದಿನಗಳ ಸಂಭ್ರಮ,ಹಾಗಾಗಿ ಸೆ.10 ರಿಂದ ನಾಲ್ಕು ದಿನಗಳ ಕಾಲ ಸಂಜೆ 6ರಿಂದ 10 ಗಂಟೆವರೆಗೆ ಮೈಸೂರು ಅರಮನೆಗೆ
ವರ್ಣರಂಜಿತ ವಿದ್ಯುತ್ ದೀಪಾಲಂಕಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಮಾಡಲಾಗಿದೆ.
ಮೈಸೂರು ಅರಮನೆ ವರ್ಣರಂಜಿತ ದೀಪಾಲಂಕಾರದಿಂದ ಜಗಮಗಿಸಿದರೆ, ಜಯರಾಮ ಮಹಾದ್ವಾರದಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಯಶೋಗಾಥೆಯನ್ನು ಬಿಂಬಿಸುವ ಮನಮೋಹಕ ಎಲ್ಇಡಿ ಪ್ರದರ್ಶನ, ಧ್ವನಿ ಮತ್ತು ಬೆಳಕು ಹಾಗೂ ತ್ರಿ-ಡಿ ಮ್ಯಾಪಿಂಗ್ ಪ್ರದರ್ಶನ ಇರಲಿದೆ.
ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಕ್ಕೇರಿ ನೂರು ದಿನಗಳ ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಸಾರ್ವಜನಿಕರ ಕುಂದುಕೊರತೆ ಆಲಿಸಿ ಪರಿಹರಿಸಲು “ಪ್ರಜಾಸೇವಾ” ಇಲಾಖೆ ಸ್ಥಾಪನೆ, ಗ್ಯಾರಂಟಿ ಯೋಜನೆಗಳಡಿ ಸೋರಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ, ರೌಡಿಗಳ ನಿಗ್ರಹಕ್ಕೆ ಜಿಲ್ಲೆಗೊಂದು ಪಡೆ ರಚನೆ, ಕೇಂದ್ರದ ನೀತಿ ಆಯೋಗದ ಸಭೆಯಲ್ಲಿ ಕರ್ನಾಟಕದ ಬೇಡಿಕೆಗಳ ಪ್ರಬಲ ಮಂಡನೆ, ನೂತನ ಸಿಎಸ್ಆರ್ ನೀತಿ, ಬರ ಪರಿಸ್ಥಿತಿ ನಿರ್ವಹಣೆಗೆ ವಿಭಾಗವಾರು ಪರಿಶೀಲನೆ, ಕರಾವಳಿ ಪ್ರವಾಸೋದ್ಯಮ ಉತ್ತೇಜನಕ್ಕೆ ವಿಶೇಷ ಒತ್ತು, ಬಿಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು, 72 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕ್ರಮ ಸೇರಿದಂತೆ ಅನೇಕ ಕಾರ್ಯಗಳನ್ನು ಅನುಷ್ಠಾನಗೊಳಿಸಲಾಗಿದೆ.
ಮುಖ್ಯಮಂತ್ರಿಗಳು ಮುಂಬರುವ ದಿನಗಳಲ್ಲಿ ದೃಢ ಕರ್ನಾಟಕದ ಸಂಕಲ್ಪಕ್ಕೆ ಮಹತ್ವದ ಹೆಜ್ಜೆಗಳನ್ನು ಇಡಲು ಆಲೋಚಿಸಿದ್ದಾರೆ ಎಂದು ವಾರ್ತಾ ಇಲಾಖೆ ಆಯುಕ್ತ ಎಂ.ಎನ್. ಅನುಚೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
