ಲಿಂಗಸುಗೂರು: ಲಿಂಗಸುಗೂರು ತಾಲೂಕಿನಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದ್ದು ಸ್ಥಳೀಯ ಶಾಸಕರು ಹಾಗೂ ತಾಲೂಕು ಆಡಳಿತ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿವೆ ಎಂದು
ಆಮ್ ಆದ್ಮಿ ಪಕ್ಷ ಲಿಂಗಸುಗೂರು ತಾಲೂಕು ಘಟಕ ಗಂಭೀರ ಆರೋಪ ಮಾಡಿದೆ.
ಸಮಸ್ಯೆಗಳ ಪಟ್ಟಿಯನ್ನೇ ಸಿದ್ದಪಡಿಸಿ ಮುಖ್ಯ ಮಂತ್ರಿಗಳು ಮತ್ತು ರಾಜ್ಯಪಾಲರಿಗೆ ಪಕ್ಷದ ಮುಖಂಡರು ಮನವಿ ರವಾನಿಸಿದರು.
ಲಿಂಗಸುಗೂರಿನ ಸಮಸ್ಯೆಗಳ ಕುರಿತು ಸಹಾಯಕ ಆಯುಕ್ತರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯ ಮಂತ್ರಿಗಳಿಗೆ ಆಮ್ ಆದ್ಮಿ ಪಕ್ಷದ ಲಿಂಗಸುಗೂರು ತಾಲೂಕು ಅಧ್ಯಕ್ಷರು, ಜನಹಿತ ಸೇವಾ ಸಮಿತಿಯ ಹನುಮಂತ ರಾಥೋಡ್ ಹಾಗೂ ಜಿಲ್ಲಾ ರೈತ ಮಾರ್ಚ ಅಧ್ಯಕ್ಷರು, ಮಾಧ್ಯಮ ಪ್ರತಿನಿಧಿ ವಸಂತ ಕುಮಾರ್ ಆರ್
ಮನವಿ ಸಲ್ಲಿಸಿದರು.
ಮಳೆ ಇಲ್ಲದೆ ರೈತರು ತೊಂದರೆಯಲ್ಲಿ ಇದ್ದಾರೆ, ಹಲವು ಕಡೆ ಸಾಲಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಕುಟುಂಬಕ್ಕೆ ಇದುವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಪರಿಹಾರ ನೀಡಿ ಮಾಹಿತಿ ಒದಗಿಸಬೇಕು,
ಬರಗಾಲ ಘೋಷಣೆಯಾಗಿದ್ದು ಅದರ ಪರಿಹಾರಕ್ಕಾಗಿ ತಾಲೂಕಿಗೆ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬ ಮಾಹಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಸುಮಾರು ೨೦೨೩ರ ನಂತರ ೨೬ ವರೆಗೆ ಬೆಳೆ ವಿಮೆ ಪರಿಹಾರ ನೀಡಿಲ್ಲ.
ವಿರೋಧ ಪಕ್ಷದವರಾದ, ಬಿ.ಜೆ.ಪಿ ಹಾಗೂ ಜೆ.ಡಿ.ಎಸ್ ನವರು ಆಡಳಿತ ಪಕ್ಷ ಕಾಂಗ್ರೇಸ್ ನವರೊಂದಿಗೆ ಒಳ ಹೊಂದಾಣಿಕೆ ಮಾಡಿಕೊಂಡಿದ್ದು, ತಮ್ಮ ತಮ್ಮ ಸ್ವಾರ್ಥಕ್ಕಾಗಿ ಸಮಾವೇಶಗಳನ್ನು ಮಾಡುತ್ತಾ ನೆಪ ಮಾತ್ರದ ಬರಗಾಲದ ಹೋರಾಟ ಮಾಡುತ್ತಿದ್ದು ಜನರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಾಲೆ – ಕಾಲೇಜಗಳಲ್ಲಿ ಅಗತ್ಯ ಶಿಕ್ಷಕ ಹುದ್ದೆಗಳ ನೇಮಕಾತಿ ಆಗಿಲ್ಲ,ಹಾಗಾಗಿ ಮಕ್ಕಳ ಸ್ಥಿತಿ ಆತಂತ್ರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಲಿಂಗಸುಗೂರು ಹಾಗೂ ಮುದುಗಲ್ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ. ಹುದ್ದೆ ಭರ್ತಿಯಾಗದ ಕಾರಣ ಆರೋಗ್ಯ ಸೇವೆಗೆ ತೊಂದರೆಯಾಗಿದೆ. ಮುದುಗಲ್ ಹೋಬಳಿಯ ಪಟ್ಟಣದಲ್ಲಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
ಹೆರಿಗೆ ವೈದ್ಯರು ಇಲ್ಲ ಸ್ಕಾನ್ ಮಾಡುವವರು ಇಲ್ಲ. ವಿವಿಧ ರೋಗ ಪತ್ತೆ ಸೌಲಭ್ಯಕ್ಕಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯೂ ಇಲ್ಲ. ಮುದಗಲ್ ಸುತ್ತಲು ೮೦ ಹಳ್ಳಿಗಳು ಇದ್ದು ಈ ಜನರಿಗೆ ಭಾರಿ ತೊಂದರೆಯಾಗಿದೆ.
ಹಿಂದೆ ಕಾಂಗ್ರೆಸ್ ಶಾಸಕರು ಇದ್ದಾಗಲೂ ಯಾವುದೇ ಸಮಸ್ಯೆ ಬಗೆಹರಿಸಲಿಲ್ಲ,ಈಗ ಬಿಜೆಪಿ ಶಾಸಕರು ಇದ್ದಾರೆ,ಇವರೂ ಕೂಡಾ ಜನರ ಸಮಸ್ಯೆ ಬಗೆ ಹರಿಸುವುದಿರಲಿ ಆಲಿಸುವುದೂ ಇಲ್ಲ.ಇವೆರಡೂ ಪಕ್ಷಗಳು ಒಂದು ನಣ್ಯದ ಎರಡು ಮುಖಗಳಿದ್ದಂತೆ ಎಂದು ಟೀಕಿಸಿದ್ದಾರೆ.
ಯಾವುದೇ ಕೆಲಸ ಮಾಡದೆ ಅಸಹಕಾರದ ನೆಪ ಹೇಳಿ ಕ್ಷೇತ್ರದ ಜನತೆಯನ್ನು ಶೋಷಣೆ ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ರಾಯಚೂರು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಯಚೂರು ಇವರು ಜಲಜೀವನ ಮಿಷನ್ ನಿರುಪಯುಕ್ತಗೊಳಿಸಿದ್ದಾರೆ. ಎಲ್ಲಿಯೂ ನೀರು ಸರಬರಾಜು ಮಾಡಿಲ್ಲ, ನೀರು ತೋಟ್ಟಿಗಳು, ಭೋರವೆಲ್ಗಳು, ಹಾಗೂ ಸಂಪರ್ಕ ವ್ಯವಸ್ಥೆಗೆ ನೀರು ಸರಬರಾಜು ಆಗುವಂತೆ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ಪಟ್ಟಣ ದಕ್ಷಣದ ಭಾಗದ ಹುಲಿಗುಡ್ಡ ಶಿವಾರದ ವಾರ್ಡ್ಗಳಲ್ಲಿ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ.
ಇನ್ನಾ ಕುಡಿಯುವ ನೀರು ಯಾವ ಹಳ್ಳಿಗಳಲ್ಲಿಯೂ ಸಮರ್ಪಕವಾಗಿ ಪೂರೈಕೆ ಆಗುವುದಿಲ್ಲ. ಮುದಗಲ್ ಹೋಬಳಿಯಲ್ಲಿ ೧೫ ದಿನಗಳಿಗೊಮ್ಮೆ ಕೂಡಾ ನೀರುಪೂರೈಕೆಯಾಗುತ್ತಿಲ್ಲ.ಇಲ್ಲಿ ಸುಮಾರು ದಿನಗಳಿಂದ ಸಂಗ್ರಹಿಸಿದ ನೀರನ್ನು ಬಳಕೆ ಮಾಡುತ್ತಿರುವುದರಿಂದ ಸಂಕ್ರಾಮಿಕ ರೋಗಗಳು ಹರಡುತ್ತಿವೆ. ರಾಯಚೂರು ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದು ಹನುಮಂತ ರಾಥೋಡ್ ಹಾಗೂ ವಸಂತ ಕುಮಾರ್
ಬೇಸರ ಪಟ್ಟಿದ್ದಾರೆ.
ಲಿಂಗಸುಗೂರು ಪಟ್ಟಣದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಜನಾಂಗದ ನಿವಾಸಿಗಳ ಮನೆಗೆ ಉಚಿತವಾಗಿ ಪೌರಾಡಳಿತ ಇಲಾಖೆಯಿಂದ ಕುಡಿಯುವ ನೀರಿನ ನಲ್ಲಿ ಮಂಜೂರು ಮಾಡಬೇಕು ಮತ್ತು ಕೊಳಾಯಿ ಅಳವಡಿಸಿ ನೀರು ಪೂರೈಸಲು ಪಂಚಾಯತ್ ಅಧಿಕಾರಿಗೆ ಆದೇಶ ನೀಡುವಂತೆ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
