ಮೈಸೂರು, ಮಾ.1: ಹೋಳಿ ಹಬ್ಬದಲ್ಲಿ ನಾಯಿ, ಬೆಕ್ಕು, ಸಾಕು ಪ್ರಾಣಿಗಳು, ಹಸು, ಆಡು ಇತ್ಯಾದಿ ಯಾವುದೇ ಪ್ರಾಣಿಗಳ ಮೇಲೆ ಬಣ್ಣಗಳನ್ನು ಎರಚಬಾರದು ಎಂದು ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮನವಿ ಮಾಡಿದ್ದಾರೆ.
ಚರ್ಮ, ಬಾಯಿ, ಕಣ್ಣು, ಮೂಗು ಮೂಲಕ ಪ್ರಾಣಿಗಳ ದೇಹ ಸೇರುವ ಯಾವುದೇ ರಾಸಾಯನಿಕ ಅಥವಾ ನೈಸರ್ಗಿಕ ಬಣ್ಣವು ವಿವಿಧ ರೀತಿಯ ಅಲರ್ಜಿ, ವಾಂತಿ, ಕುರುಡುತನಕ್ಕೆ ಎಡೆ ಮಾಡಬಹುದು.ಬಣ್ಣವು ಪ್ರಾಣಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಇದು ಪ್ರಾಣಿ ಹಿಂಸೆ ಕಾಯಿದೆ, 1960 (ಪಿಸಿಎಸಿಟಿ) ಅಡಿಯಲ್ಲಿ ಕಾನೂನುಬಾಹಿರವಾಗಿದೆ ಮತ್ತು ಅಂತಹ ಯಾವುದೇ ಪ್ರಕರಣಗಳು ವರದಿಯಾದರೆ, ಕಾಯ್ದೆಯ ಅನುಸಾರ ಬಣ್ಣ ಹಾಕುವವರ ಮೇಲೆ ಪ್ರಕರಣ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಕ್ರಮ್ ಅಯ್ಯಂಗಾರ್ ಒತ್ತಾಯಿಸಿದ್ದಾರೆ.
