ಮೈಸೂರು: ಪೋಷಕರು ಮಕ್ಕಳಿಗೆ ಶಿಕ್ಷಣದ ಜತೆಗೆ,ಸಂಸ್ಕಾರಯುತ ಶಿಕ್ಷಣ ಕೊಡಿಸಿದರೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಹುದು
ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸಂಸ್ಕಾರಯುತ ಶಿಕ್ಷಣ ಸಿಕ್ಕರೆ ಮುಂದಿನ ದಿನಗಳಲ್ಲಿ ಉತ್ತಮ ಪ್ರಜೆಗಳಾಗಿ ದೇಶದ ಭವಿಷ್ಯವನ್ನು ರೂಪಿಸುವ ನಾಯಕತ್ವ ಹೊಂದಲಿದ್ದಾರೆ ಎಂದು ಶಾಸಕರು ತಿಳಿಸಿದರು.
ಮೈಸೂರಿನ ವಿಜಯನಗರ ನಾಲ್ಕನೇ ಹಂತದ ಒಂದನೇ ಘಟ್ಟದಲ್ಲಿರುವ ಕಲಿಕೆ ಎಜುಕೇಷನ್ ಟ್ರಸ್ಟ್ನ ಎರಡನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಶಾಲಾ ಬ್ಯಾಗ್ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಲಿದ್ದಾರೆ. ಮನೆಯಲ್ಲಿ ಮೊದಲ ಪಾಠವಾದರೆ,ಶಾಲೆಯಲ್ಲಿ ಬದುಕಿನ ದಿಕ್ಕನ್ನು ತೋರಿಸುವ,ಮಾರ್ಗದರ್ಶನ ನೀಡುವಂತಹ ಪಾಠ ಹೇಳಲಾಗುತ್ತದೆ. ಮಕ್ಕಳಿಗೆ ಬದುಕಿನ ಶಿಕ್ಷಣ,ಆದರ್ಶ,ಮಾನವೀಯ ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಮಕ್ಕಳು ಸೇರ್ಪಡೆಹೊಂದಿದ್ದಾರೆ. ಮಕ್ಕಳು ಕಲಿಕೆಯಲ್ಲಿ ಸದಾ ಮುಂದಿರಬೇಕು. ಕಲಿಕೆ ಜತೆಗೆ ಇನ್ನಿತರ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ಜಿಟಿಡಿ ಕಿವಿ ಮಾತು ಹೇಳಿದರು.
ಮಕ್ಕಳು ಸಂಸ್ಕಾರಯುತರಾಗಬೇಕು, ತಂದೆ-ತಾಯಿ,ಶಿಕ್ಷಕರನ್ನು ಗೌರವಿಸಬೇಕು. ಮನೆಯಲ್ಲಿ ಪೋಷಕರಿಗೆ,ಶಾಲೆಯಲ್ಲಿ ಶಿಕ್ಷಕರಿಗೆ ಗೌರವದಿಂದ ನೋಡಬೇಕು ಎಂದು ಸಲಹೆ ನೀಡಿದರು.
ಪೋಷಕರು ಬಹಳ ಕಷ್ಟಪಟ್ಟು ಶಾಲೆಗೆ ಸೇರಿಸಿ ಚೆನ್ನಾಗಿ ಓದುವಂತೆ ಮಾಡುತ್ತಾರೆ. ದೊಡ್ಡವರಾದ ಮೇಲೆ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಜಿ.ಟಿ.ದೇವೇಗೌಡ ತಿಳಿಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿವೃತ್ತ ಹಿರಿಯ ವ್ಯವಸ್ಥಾಪಕ ಬಿ.ಎಲ್.ರಾಮೇಗೌಡ, ಎಂಐಟಿ ಕಾಲೇಜು ಸಹ ಪ್ರಾಧ್ಯಾಪಕ ಡಾ.ವಿ.ಮಂಜುನಾಥ, ವಿಜಯನಗರ ಮಂಜು ಮತ್ತಿತರರು ಹಾಜರಿದ್ದರು.
