ಬೆಂಗಳೂರು: ಹೈದರಾ ಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಎಂಬ ವ್ಯಕ್ತಿ ಜತೆ ಸೇರಿ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೈಸ್ ಯೋಜನೆಯನ್ನು ಲಪಟಾಯಿಸಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ಹೈದರಾಬಾದ್ ನಲ್ಲಿ ನೆಲೆಸಿರುವ ಉದ್ಯಮಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದು, ವಿವಿಧ ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಅಂತಹ ವ್ಯಕ್ತಿಯ ಜತೆ ಸಿಎಂ ಶಾಮೀಲಾಗಿ ಇಡೀ ಯೋಜನೆಯನ್ನೇ ಲಪಟಾಯಿಸಲು ಸಂಚು ರೂಪಿಸಿದ್ದಾರೆ. ಇವರೊಂದಿಗೆ ಇನ್ನಷ್ಟು ಪ್ರಭಾವಿಗಳು ಕೈ ಜೋಡಿಸಿದ್ದಾರೆ ಎಂದು ಸಚಿವರು ಗಂಭೀರ ಆರೋಪ ಮಾಡಿದರು.
ನಿಮ್ಮ ಪಾಪದ ಕೊಡ ತುಂಬಿದೆ. ನೀವು 10 ಸಾವಿರ ಎಕರೆ ಮಾಡಿ. ಆದರೆ ನ್ಯಾಯವಾಗಿ ಮಾಡಿ. ಒಳ್ಳೆಯ ಮಾರ್ಗದಲ್ಲಿ ಸಂಪಾದನೆ ಮಾಡಿ. ಬೇಡ ಎಂದವರು ಯಾರು? ಈಗಾಗಲೇ ಬೆಂಗಳೂರು ಮೈಸೂರು ನಡುವೆ ಎಕ್ಸ್ ಪ್ರೆಸ್ ಹೆದ್ದಾರಿ ಆಗಿದೆ. ಮತ್ತೊಂದು ರಸ್ತೆ ಯಾಕೆ ಬೇಕು? ಬೆಂಗಳೂರಿನಿಂದ ಮೈಸೂರಿನ ತನಕ 1.75 ಲಕ್ಷ ಎಕರೆ ಜಮೀನು ಗುರುತಿಸಿದ್ದಾರೆ. ಅದನ್ನು ಲೂಟಿ ಹೊಡೆಯಬೇಕು. ನೈಸ್, ನೈಸೆಲ್ ಎಲ್ಲಾ ಹೋಗಿ ಡಿವೈನಿಟಿ ಅಂತ ಬರುತ್ತಿದೆ. ತೆಲಂಗಾಣದ ವ್ಯಕ್ತಿಗೆ ಇವರು ರೆಡ್ ಕಾರ್ಪೆಟ್ ಹಾಸುತ್ತಿದ್ದಾರೆ. ಎಷ್ಟು ಕೋಟಿಗೆ ಡೀಲ್ ಆಗುತ್ತಿದೆ, ಮಹೇಶ್ ರೆಡ್ಡಿ ಎಂಬ ವ್ಯಕ್ತಿ ಯಾರು ಎನ್ನುವ ಎಲ್ಲಾ ಮಾಹಿತಿಯೂ ನನ್ನ ಬಳಿ ಇದೆ. ಸಮಯ ಬರುತ್ತೆ ಎಲ್ಲಾ ವಿಚಾರ ತಿಳಿಯುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಡಿಕೆಶಿ ನನ್ನ ಮೇಲೆ ಆರೋಪ ಮಾಡಿದ್ದಾರೆ. ಕುಮಾರಸ್ವಾಮಿ ಕೂಡ ನೈಸ್ ಯೋಜನೆ ವ್ಯಾಪ್ತಿಯಲ್ಲಿ ಭೂಮಿ ಹೊಂದಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಆ ಭಾಗದಲ್ಲಿ ಎಲ್ಲಿಯೇ ಆದರೂ ನಾನು ಜಮೀನು ಖರೀದಿ ಮಾಡಿರುವುದನ್ನು ರುಜುವಾತು ಮಾಡಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
ಈ ಭೂಮಿ ಇರುವ ಪ್ರದೇಶಕ್ಕೆ ಮಾಧ್ಯಮಗಳನ್ನು ಮತ್ತು ಸಾರ್ವಜನಿಕರನ್ನು ಕರೆದುಕೊಂಡು ಹೋಗಿ ತೋರಿಸಿದ ಸಚಿವ ಕುಮಾರಸ್ವಾಮಿ ಅವರು, ಇದು ಅತ್ಯಂತ ಫಲವತ್ತಾದ ಕೃಷಿ ಭೂಮಿಯಾಗಿದೆ. ಇಲ್ಲಿ ಮುಖ್ಯಮಂತ್ರಿ ಡಿಕೆಶಿ ಸುಮಾರು 300 ಎಕರೆಯಷ್ಟು ಜಮೀನು ಹೊಂದಿದ್ದಾರೆ ಎಂದು ದೂರಿದರು.
ಪೂಜ್ಯ ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಇದೇ ವೇಳೆ ಕುಮಾರಸ್ವಾಮಿ ಆಗ್ರಹಿಸಿದರು.
ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾರೆ ಇಂತಹ ಧರ್ಮ ದ್ರೋಹಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಹಕಾರ ಕೊಡುತ್ತಾ ಬಂದಿದ್ದಾರೆ. ಇಲ್ಲಿ ನನಗೆ ರಾಜಕೀಯ ಬೇಕಿಲ್ಲ. ರೈತರ ಭೂಮಿ ವಾಪಸ್ ಕೊಡಿಸುವ ಉದ್ಧೇಶದಿಂದ ಹೋರಾಟ ಮಾಡುತ್ತಿದ್ದೇನೆ. ಭೂಮಿ ಕಳೆದುಕೊಂಡ ಜನರು ಕೂಡ ಒಟ್ಟಾಗಿ ಹೋರಾಟಕ್ಕೆ ಧುಮುಕಬೇಕು ಎಂದು ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಎ.ಮಂಜುನಾಥ್, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ಹಿರಿಯ ಮುಖಂಡ ರುದ್ರೇಶ್ ಮತ್ತಿತರ ಮುಖಂಡರು ಹಾಜರಿದ್ದರು.
