ಮೈಸೂರು: ಮಹಾರಾಣಿ ಮಹಿಳಾ ವಿಜ್ಞಾನ
ಕಾಲೇಜು ಎನ್.ಎಸ್.ಎಸ್. ಘಟಕವು ಜಯಪುರ ಹೋಬಳಿ ಹಾರೋಹಳ್ಳಿ ಗ್ರಾಮದಲ್ಲಿ ಫೆ 16 ರಿಂದ 20 ರವರೆಗೆ ವಾರ್ಷಿಕ ವಿಶೇಷ ಶಿಬಿರವನ್ನು ಆಯೋಜಿಸಿದೆ.
ನನ್ನ ಭಾರತಕ್ಕಾಗಿ ಯುವಜನತೆ
ಎಂಬ ಶೀರ್ಷಿಕೆಯಡಿ ಆಯೋಜಿಸಲಾಗಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಎರಡು ಘಟಕಗಳ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಈ ವಿಶೇಷ ಶಿಬಿರದ ಉದ್ದೇಶ ಮತ್ತು ಕಾರ್ಯ ಕ್ರಮಗಳು ಗ್ರಾಮಾಭಿವೃದ್ಧಿ ಹಾಗೂ ವಿದ್ಯಾರ್ಥಿ ಸಬಲೀಕರಣವನ್ನು ಒಳಗೊಂಡಿವೆ.
ವಿವಿಧ ಸಾಮಾಜಿಕ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಅಭಿಯಾನ.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಪ್ರದರ್ಶನ.
ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ.
ಶಾಲಾ ಆವರಣದಲ್ಲಿ ಸಸ್ಯೋದ್ಯಾನ ಮತ್ತು ಅಡಿಗೆ ತೋಟದ ನಿರ್ಮಾಣ. ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಜ್ಞಾನ, ಸಮಾಜಶಾಸ್ತ್ರ ಮತ್ತು ಗಣಿತ ವಿಷಯಗಳ ಗೋಡೆ ಬರಹ ಹಾಗು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಉತ್ತೇಜನ ನೀಡುವುದರೊಂದಿಗೆ ಗ್ರಾಮೀಣ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿರುವ ಹಲವು ಸಮುದಾಯ ಕೇಂದ್ರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಪ್ರಾಂಶುಪಾಲ ಪ್ರೊ.ಅಬ್ದುಲ್ ರಹಿಮಾನ್ ಎಂ ಅವರು, ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ, ನೈರ್ಮಲ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಜವಾಬ್ದಾರಿ. ಆದರೆ, ಅದರ ಜೊತೆಗೆ ಸಮುದಾಯಗಳ ನಡುವೆ ಒಗ್ಗಟ್ಟು,ಸಾಮರಸ್ಯ ಮತ್ತು ಸಹಬಾಳ್ವೆ ಯಂತಹ ಆಂತರಿಕ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಪಾಲ್ಗೊಳ್ಳುವುದು ಕೇವಲ ಸಮಾಜದ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಕಾಯಕವಲ್ಲ, ಬದಲಿಗೆ, ಅದು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಬಹು ಮುಖ್ಯವಾಗಿ ಬೇಕಾದ ಆಸಕ್ತಿ,ಅರಿವು ಮತ್ತು ಅವಕಾಶವನ್ನು ನೀಡುತ್ತದೆ. ಹಾಗಾಗಿ, ಈ ಅವಕಾಶವನ್ನು ಶಿಬಿರಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಾರೋಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪಾಪೇಗೌಡ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಸಮಾಜದ ಅಭಿವೃದ್ಧಿ ಕೆಲಸಗಳಿಗೆ ತೊಡಗಿಸಿಕೊಳ್ಳುವುದು ಒಳ್ಳೆ ಗುಣ ಲಕ್ಷಣ ಎಂದು ಹೇಳಿದರು.
ಕೃಷಿ ಸಹಕಾರಿ ಸಂಘದ ಕಾರ್ಯದರ್ಶಿ ಮಣಿ, ಹಾರೋಹಳ್ಳಿ ಕ್ಲಸ್ಟರ್ ಸಿ.ಆರ್.ಪಿ. ಸರಿತಾ, ಪ್ರೌಢಶಾಲೆ ವಿಭಾಗದ ಮುಖ್ಯೋಪಾಧ್ಯಾಯರಾದ ಜಯಂತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಿವಣ್ಣ,
ಅಧ್ಯಾಪಕರಾದ ರಾಜೇಶ್ವರಿ, ಭೀಮೇಶ್ ಜೆ, ಗೋವಿಂದರಾಜು ಮಾತನಾಡಿದರು.
ಶಿಬಿರದ ಉದ್ದೇಶಗಳನ್ನು ಕುರಿತು ಡಾ.ಲಕ್ಷ್ಮಣ ಬಿ ತಿಳಿಸಿಕೊಟ್ಟರು
ಕುಮಾರಿ ತನುಶ್ರೀ ಸ್ವಾಗತಿಸಿದರೆ,ಅನನ್ಯ ವಂದನಾರ್ಪಣೆ ಸಲ್ಲಿಸಿ,ಮಾನ್ಯ ನಿರೂಪಿಸಿದರು.
ಸಮಾರಂಭದಲ್ಲಿ ಎನ್ಎಸ್ಎಸ್ ಘಟಕ ಎರಡರ ಕಾರ್ಯಕ್ರಮ ಅಧಿಕಾರಿ ಡಾ. ಶುಭ ಬಿ.ಎಸ್., ಅಧ್ಯಾಪಕರಾದ ಡಾ. ರಾಮಚಂದ್ರ, ಡಾ.ಆನಂದ, ಸಿದ್ದರಾಜು, ದಿನೇಶ್ ಎಚ್.ಬಿ ಕವಿತಾ, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
