ಬೆಂಗಳೂರು: ಬೆಂಗಳೂರಿನ ಹೆಚ್ ಎ ಎಲ್ ಠಾಣೆಯ ಕಾನ್ಸ್ಟೇಬಲ್ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೆ.ಆರ್ ಪುರಂ ಪೊಲೀಸ್ ಕ್ವಾರ್ಟಸ್ನಲ್ಲೇ ನೇಣುಬಿಗಿದುಕೊಂಡು ಕಾನ್ಸ್ಪೇಬಲ್ ರಾಜೇಶ್ ಅವರ ಪತ್ನಿ ಲಕ್ಷ್ಮಿಪ್ರಿಯಾ(26) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಕ್ಷಿಣೆ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಲಕ್ಷ್ಮಿ ತವರಿನವರು ಆರೋಪಿಸಿದ್ದಾರೆ.
ಲಕ್ಷ್ಮೀ ತಂದೆ ಕುಮಾರ್ ಆರಾಧ್ಯ ಅವರು ನೀಡಿದ ದೂರಿನ ಮೇರೆಗೆ ಹೆಚ್ಎಎಲ್ ಠಾಣೆ ಕಾನ್ಸ್ಟೇಬಲ್ ರಾಜೇಶ್ ಹಾಗೂ ತಂದೆ-ತಾಯಿ ಸೇರಿದಂತೆ ನಾಲ್ವರ ವಿರುದ್ಧ ವರದಕ್ಷಿಣೆ ಪ್ರಕರಣ ದಾಖಲಿಸಲಾಗಿದೆ.
ಮೈಸೂರು ಮೂಲದ ಲಕ್ಷ್ಮೀ ಪ್ರಿಯಾಗೆ 2023ರಲ್ಲಿ ಕಾನ್ಸ್ಟೇಬಲ್ ರಾಜೇಶ್ ಜೊತೆ ವಿವಾಹವಾಗಿತ್ತು. ಈ ವೇಳೆ 350 ಗ್ರಾಂ ಚಿನ್ನ, 1 ಕೆ.ಜಿ.ಬೆಳ್ಳಿ ಹಾಗೂ ಗೃಹ ಬಳಕೆ ವಸ್ತುಗಳು ನೀಡಲಾಗಿತ್ತು. ದಂಪತಿಗೆ 8 ತಿಂಗಳ ಹೆಣ್ಣು ಮಗುವಿದೆ.
ಮದುವೆಯಾದ ಕೆಲ ತಿಂಗಳ ಬಳಿಕ ವರದಕ್ಷಿಣೆ ಹಣಕ್ಕಾಗಿ ರಾಜೇಶ್ ಪೀಡಿಸುತ್ತಿದ್ದ,ಅಲ್ಲದೆ ಬೇರೆ ಯುವತಿ ಜೊತೆ ಸಂಬಂಧ ಹೊಂದಿದ್ದ. ಇದನ್ನು ಮಗಳು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುವುದನ್ನ ಮುಂದುವರೆಸಿದ್ದ. ಮೇ 22ರಂದು ತನ್ನ ಮಗಳು ವಾಟ್ಸಾಪ್ನಲ್ಲಿ ಮೊಬೈಲ್ ಪಾಸ್ವರ್ಡ್ ಕಳುಹಿಸಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಇದಕ್ಕೆ ರಾಜೇಶ್ ಹಾಗೂ ಆತನ ಮನೆಯವರೇ ಕಾರಣ ಎಂದು ಲಕ್ಷ್ಮೀ ತಂದೆ ದೂರಿನಲ್ಲಿ ತಿಳಿಸಿದ್ದಾರೆ.
ವರದಕ್ಷಿಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ಪೊಲೀಸರು, ರಾಜೇಶ್ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
