ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ,ಮಹಿಳಾ ಸಬಲೀಕರಣ”ದ ಹೆಸರಿನಲ್ಲಿ ನೀಡಲಾದ ಉಚಿತ ಯೋಜನೆಗಳ ಭರಾಟೆಯಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಎಳ್ಳುನೀರು ಬಿಡಲಾಗಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ರಂಜಿತಾ ಸುಬ್ರಮಣ್ಯ ಟೀಕಿಸಿದ್ದಾರೆ.
ಈ ಉಚಿತ ಯೋಜನೆಗಳ ಭರಾಟೆಯಲ್ಲಿ ಮಹಿಳೆಯರ ನೈಜ ಗೌರವ, ಭದ್ರತೆ ಹಾಗೂ ರಾಜಕೀಯ ಪ್ರಾತಿನಿಧ್ಯ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ರಾಜ್ಯದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿರುವ ಮಹಿಳೆಯರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಅವರ ಸಬಲೀಕರಣಕ್ಕೆ ನಿಜವಾದ ಆದ್ಯತೆ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
೩೪ ಸಚಿವರ ಬೃಹತ್ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ಸಿಗಲಿಲ್ಲ, ರಾಜ್ಯದಲ್ಲಿ ಅರ್ಹ ಮತ್ತು ಸಮರ್ಥ ಮಹಿಳಾ ನಾಯಕಿಯರಿದ್ದರೂ, ಹಣಕಾಸು, ಗೃಹ ಅಥವಾ ಕಂದಾಯದಂತಹ ಪ್ರಮುಖ ನಿರ್ಧಾರ ಕೈಗೊಳ್ಳುವ ಸಚಿವ ಸ್ಥಾನಗಳಿಂದ ಅವರನ್ನು ದೂರವಿಡಲಾಗಿದೆ ಎಂದು ಆರೋಪಿಸಿದ್ದಾರೆ.
‘ಶಕ್ತಿ’ ಮತ್ತು ‘ಗೃಹಲಕ್ಷ್ಮಿ’ ಯೋಜನೆಗಳ ಪ್ರಚಾರದ ನಡುವೆ, ಬಸ್ಗಳ ಕೊರತೆಯಿಂದ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ದಿನನಿತ್ಯ ಪರದಾಡುವಂತಾಗಿದೆ. ಇನ್ನೊಂದೆಡೆ, ಹಾಲು, ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಮಧ್ಯಮ ವರ್ಗದ ಗೃಹಿಣಿಯರ ಕುಟುಂಬದ ಬಜೆಟ್ ಅನ್ನೇ ಸರ್ಕಾರ ತಲೆಕೆಳಗಾಗಿಸಿದೆ ಎಂದು ರಂಜಿತಾ ವ್ಯಂಗ್ಯವಾಡಿದ್ದಾರೆ.
ಉಚಿತ ಹಣ ಕೊಡುವುದೇ ಸಬಲೀಕರಣವಲ್ಲ. ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶ, ಕೌಶಲ್ಯಾಭಿವೃದ್ಧಿ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಪ್ರೋತ್ಸಾಹ ನೀಡುವ ಯಾವುದೇ ದೀರ್ಘಕಾಲೀನ ಯೋಜನೆಗಳು ಜಾರಿಯಲ್ಲಿಲ್ಲ.
ಮೀನು ಹಿಡಿದು ಕೊಡುವುದಕ್ಕಿಂತ, ಮೀನು ಹಿಡಿಯುವುದನ್ನು ಕಲಿಸುವುದು ನಿಜವಾದ ಸಬಲೀಕರಣ, ಆದರೆ ಈ ಸರ್ಕಾರ ಮಹಿಳೆಯರನ್ನು ಶಾಶ್ವತವಾಗಿ ಸರ್ಕಾರದ ಸಹಾಯಧನದ ಮೇಲೆಯೇ ಅವಲಂಬಿತರನ್ನಾಗಿ ಮಾಡಿ, ಅವರ ಆತ್ಮಾಭಿಮಾನವನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ತಕ್ಷಣವೇ ತನ್ನ ಪ್ರಚಾರಪ್ರಿಯತೆಯಿಂದ ಹೊರಬಂದು, ಸಂಪುಟದಲ್ಲಿ ಮಹಿಳಾ ನಾಯಕಿಯರಿಗೆ ಅರ್ಹ ಸ್ಥಾನಮಾನ ನೀಡಬೇಕು ಹಾಗೂ ರಾಜ್ಯದ ಹೆಣ್ಣುಮಕ್ಕಳ ನೈಜ ಗೌರವ ಮತ್ತು ಭದ್ರತೆಯನ್ನು ಎತ್ತಿಹಿಡಿಯಬೇಕಿದೆ ಎಂದು
ರಂಜಿತಾ ಸುಬ್ರಮಣ್ಯ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
