ಯಳಂದೂರು: ಪುಟ್ಟಣ್ಣ ಎಸ್.ಡಿ. ವಿ. ಎಸ್. ವಿದ್ಯಾ ಸಂಸ್ಥೆಯ ಕನ್ನಡ ಭಾಷಾ ಶಿಕ್ಷಕ ಗುಂಬಳ್ಳಿ ಬಸವರಾಜು ಅವರಿಗೆ ಚಿತ್ರದುರ್ಗದ
ಸಿರಿಗನ್ನಡ ಪ್ರಕಾಶನ ವತಿಯಿಂದ ಕನ್ನಡ ಸ್ವಾಭಿಮಾನ ಸ್ಮರಣಕ್ಕೆ ಗೌರವ ಪ್ರಶಸ್ತಿಯನ್ನು ನೀಡಲಾಗಿದೆ.
ಕನ್ನಡ ಪ್ರತಿಭಾ ಪರೀಕ್ಷೆಯನ್ನು ಯಶಸ್ವಿಯಾಗಿ ಸಂಘಟಿಸಿ ವಿದ್ಯಾರ್ಥಿಗಳಲ್ಲಿ ನಾಡು, ನುಡಿ ಕುರಿತು ಅಭಿಮಾನ ಮೂಡಿಸಿದ್ದಕ್ಕಾಗಿ ಹಾಗೂ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ತೋರಿದ ಒಟ್ಟಾರೆ ಸಾಧನೆಗೆ ಗುಂಬಳ್ಳಿ ಬಸವರಾಜು ಅವರು ಈ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಸ್ಮರಣೆಯಲ್ಲಿ ಹಾಗೂ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿ
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಸ್ವಾಭಿಮಾನ ಸ್ಮರಣೀಯ ಗೌರವ ಪುರಸ್ಕಾರವನ್ನು ಖ್ಯಾತ ಲೇಖಕರಾದ ನಾಗೇಶ್ ಅರಳಕುಪ್ಪೆ ಅವರು ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಹಿರಿಯ ಸಾಹಿತಿಗಳಾದ ಡಾ. ಆರ್ ಸುನಂದಮ್ಮ, ಡಾ. ವಸುಂದರ ಭೂಪತಿ, ಲೇಖಕರಾದ ದಾದಾಪೀರ್ ನವಿಲೇ ಹಾಳ್, ಪ್ರೊಫೆಸರ್ ಅಬ್ದುಲ್ ರೆಹಮಾನ್ ಪಾಷಾ, ವಿಚಾರವಾದಿಗಳಾದ ಡಾ.ಎಚ್.ಆರ್. ಸ್ವಾಮಿ, ಸಿರಿಗನ್ನಡ ಪ್ರಕಾಶನದ ಸಂಚಾಲಕ ಚಳ್ಳಕೆರೆ ಯರ್ರಿ ಸ್ವಾಮಿ ಸೇರಿದಂತೆ ಸಾಹಿತಿಗಳು ಚಿಂತಕರು ಕನ್ನಡ ಭಾಷಾ ಶಿಕ್ಷಕರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರಾದ ಗುಂಬಳ್ಳಿ ಬಸವರಾಜು ಅವರನ್ನು ಎಸ್. ಡಿ. ವಿ. ಎಸ್.ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕರ ವೃಂದ, ಪೋಷಕ ವೃಂದ, ವಿದ್ಯಾರ್ಥಿ ವೃಂದ,ಸೇರಿದಂತೆ ತಾಲೂಕಿನ ಪ್ರಮುಖರು ಅಭಿನಂದಿಸಿದರು.
