ಮೈಸೂರು: ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಪೊಲೀಸರು ಗಾಂಜಾ ಪೆಡ್ಲರ್ ಆರೋಪಿ ಇರ್ಫಾನ್ ಪಾಷ (32) ಎಂಬಾತನನ್ನು ಬಂಧಿಸಿದ್ದಾರೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ತಿಳಿಸಿದರು.
ಮಾಧ್ಯಮಗೋಷ್ಢಿಯಲ್ಲಿ ಈ ಕುರಿತು ಅವರು ಮಾಹಿತಿ ನೀಡಿದರು.
ಮೈಸೂರು ನಗರದಲ್ಲಿ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ ಕೃತ್ಯಗಳನ್ನು ನಿರ್ಮೂಲನೆ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ನಗರದ ಮಂಡಿ ಮೊಹಲ್ಲಾ ವಾಸಿ ರೂಢಿಗತ ಗಾಂಜಾ ಪೆಡ್ಲರ್ ಇರ್ಫಾನ್ ಪಾಷ ಆಲಿಯಾಸ್ ಬಟಾಣ ಎಂಬಾತನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈತ 19ನೇ ವಯಸ್ಸಿನಿಂದ ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ, ಸರಬರಾಜು ಕೃತ್ಯಗಳಲ್ಲಿ ಭಾಗಿಯಾಗಿದ್ದುದು ವಿಚಾರಣೆ ವೇಳೆ ಗೊತ್ತಾಗಿದೆ.
2014ನೇ ಸಾಲಿನಿಂದ 2025ನೇ ಸಾಲಿನವರೆಗೆ ಒಟ್ಟು 09 ಪ್ರಕರಣಗಳು ದಾಖಲಾಗಿದ್ದು, ಒಟ್ಟು 28 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.
ಈತನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಲು ಈತನ ವಿರುದ್ಧ ರೌಡಿ ಶೀಟ್ ತೆರೆದು ನಿಗಾ ವಹಿಸಲಾಗುತ್ತಿದೆ ಎಂದು ಹೇಳಿದರು.
ಈತನ ವಿರುದ್ಧ ಭದ್ರತಾ ಪ್ರಕರಣ ಕೂಡಾ ದಾಖಲಿಸಲಾಗಿರುತ್ತದೆ. ಈತನ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಈತನು ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದು ನ್ಯಾಯಾಲಯದ ಷರತ್ತನ್ನು ಉಲ್ಲಂಘನೆ ಮಾಡಿ ಪದೇ ಪದೇ ಗಾಂಜಾ ವ್ಯವಹಾರದ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದನು.
ಈತನ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕ್ರಮ ಕೈಗೊಂಡಿದ್ದರೂ ಸಹ ಈತನು ತನ್ನ ಅಕ್ರಮ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದ ಹಿನ್ನೆಲೆಯಲ್ಲಿ ಈತನ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣದಲ್ಲಿಡಲು ವಿಶೇಷ ಕಾನೂನು ಅಡಿಯಲ್ಲಿ ಈತನನ್ನು ಬಂಧಿಸಿ, ಬಳ್ಳಾರಿ ಕಾರಾಗೃಹದಲ್ಲಿ ಇಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಮಾದಕ ದ್ರವ್ಯಗಳ ಮಾರಾಟ, ಸಂಗ್ರಹ, ಸಾಗಾಣೆ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳ ವಿರುದ್ಧ ಇದೇ ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೀಮಾ ಲಾಟ್ಕರ್ ಎಚ್ಚರಿಸಿದರು.
220 ಮೊಬೈಲ್ ವಶ:
ಮೈಸೂರು ನಗರದಲ್ಲಿ ಕಳೆದು ಹೋದ ಮೊಬೈಲ್ ಫೋನ್ಗಳ ಪತ್ತೆಗಾಗಿ ಮೈಸೂರು ನಗರ ಪೊಲೀಸರು ಕಳೆದ 1 ತಿಂಗಳಿನಿಂದ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದು, ಒಟ್ಟು 20,00,000 ಮೌಲ್ಯದ 220 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಲಾಗಿದೆ ಎಂದು ಇದೇ ವೇಳೆ ಪೊಲೀಸ್ ಆಯುಕ್ತರು ತಿಳಿಸಿದರು.
ಕೆಲವರಿಗೆ ಕಳೆದುಕೊಂಡಿದ್ದ ಮೊಬೈಲ್ ಅನ್ನು ದಾಖಲೆ ಪರಿಶೀಲಿಸಿ ಇದೇ ವೇಳೆ ಆಯುಕ್ತರು ಹಸ್ತಾಂತರಿಸಿದರು.

