ಮೈಸೂರು: ಗೌರಿ-ಗಣೇಶ ಹಬ್ಬ ಸೆ.14ರಂದು ನಡೆಯಲಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆ, ಮೆರವಣಿಗೆ ಮತ್ತು ವಿಸರ್ಜನೆಗೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಕಚೇರಿಯಿಂದ ಮಾರ್ಗಸೂಚಿ ಪ್ರಕಟಿಸಲಾಗಿದೆ.
ಗಣಪತಿ ಪ್ರತಿಷ್ಠಾಪಕರು ಮತ್ತು ವ್ಯವಸ್ಥಾಪಕರು ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆಗಳು:
ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ತೆರೆದಿರುವ ಏಕ ಗವಾಕ್ಷ ಕೇಂದ್ರದಲ್ಲಿ ಪಾಲಿಕೆ, ಪೊಲೀಸ್, ಚೆಸ್ಕಾಂ, ಪಿಡಬ್ಲ್ಯೂಡಿ, ಅಗ್ನಿಶಾಮಕ ಮತ್ತು ಪರಿಸರ ಇಲಾಖೆ ಅಧಿಕಾರಿಗಳಿಂದ ಕೂಡಿದ ಸಿಂಗಲ್ ವಿಂಡೋ ಮೂಲಕ ಅನುಮತಿ ಪಡೆಯುವುದು ಕಡ್ಡಾಯ.
ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ಪ್ರತಿಷ್ಠಾಪನೆ ಸ್ಥಳ ಆಯ್ಕೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿಸರ್ಜನಾ ಮೆರವಣಿಗೆಗೆ ಪೂರ್ವಾನುಮತಿ ಇದ್ದರೂ ಪ್ರತಿಷ್ಠಾಪನೆ ದಿನದಂದು ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಬೇಕು.
ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯ ಒಳಗೆ ಮುಕ್ತಾಯಗೊಳಿಸಬೇಕು. ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಕೆ ನಿಷೇಧ. ಡಿ.ಜೆ. ಮತ್ತು ಹೆಚ್ಚು ಶಬ್ದದ ಸ್ಪೀಕರ್ ಬಳಕೆಯನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಂಕಿ ಅವಘಡ ತಡೆಯಲು ಮುನ್ನೆಚ್ಚರಿಕೆ ವಹಿಸಿ ನೀರು, ಮರಳು ಸೇರಿದಂತೆ ಬೆಂಕಿ ನಂದಿಸುವ ಉಪಕರಣಗಳನ್ನು ಇಡಬೇಕು. ಸಿ.ಸಿ. ಕ್ಯಾಮರಾ ಅಳವಡಿಕೆ ಕಡ್ಡಾಯ. ರಾತ್ರಿ ವೇಳೆ ಆಯೋಜಕರು ಅಥವಾ ಸ್ವಯಂ ಸೇವಕರು ಸ್ಥಳದಲ್ಲಿ ಇರಲೇಬೇಕು.
ವಿಸರ್ಜನೆ ಮತ್ತು ಮೆರವಣಿಗೆ ವೇಳೆ ಸಂಚಾರ ಪೊಲೀಸರ ಸೂಚನೆ ಪಾಲಿಸಬೇಕು ಮತ್ತು ಅವರಿಂದ ಅನುಮತಿ ಪಡೆಯಬೇಕು. ಪಾಲಿಕೆಯಿಂದ ನಿಗದಿಪಡಿಸಿದ ಸ್ಥಳಗಳಲ್ಲೇ ವಿಸರ್ಜನೆ ಮಾಡಬೇಕು. ವಿಸರ್ಜನಾ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಮತ್ತು ನುರಿತ ಈಜುಗಾರರನ್ನು ನಿಯೋಜಿಸಿ ಅಹಿತಕರ ಘಟನೆ ತಡೆಯಬೇಕು.
ವ್ಯವಸ್ಥಾಪಕರು ಸ್ವಯಂ ಸೇವಕರಿಗೆ ಗುರುತಿನ ಚೀಟಿ ನೀಡಿ ಪ್ರತಿಷ್ಠಾಪನೆ, ಕಾರ್ಯಕ್ರಮ, ಮೆರವಣಿಗೆ ಮತ್ತು ವಿಸರ್ಜನೆ ಉಸ್ತುವಾರಿ ವಹಿಸಬೇಕು.
ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಮತ್ತು ವದಂತಿ ಹಬ್ಬಿಸಬಾರದು, ಹಬ್ಬಿಸಿದವರ ವಿರುದ್ಧ ಕ್ರಮ ಖಂಡಿತಾ ಇರಲಿದೆ. ಫ್ಲೆಕ್ಸ್, ಬ್ಯಾನರ್ ಅಳವಡಿಕೆಗೆ ಪಾಲಿಕೆಯಿಂದ ಪೂರ್ವಾನುಮತಿ ಪಡೆಯಬೇಕು ಮತ್ತು ಕೋಮು ಪ್ರಚೋದನಾತ್ಮಕ ಫ್ಲೆಕ್ಸ್ ಅಳವಡಿಸಬಾರದು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆ ನಡೆದರೆ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಲಾಗುವುದು.
ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಠಾಣೆ ಅಥವಾ ತುರ್ತು ಸಹಾಯವಾಣಿ 112ಗೆ ಮಾಹಿತಿ ನೀಡುವಂತೆ ಕಮಿಷನರ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
