ಮೈಸೂರು: ಕೊಡಗಿನಿಂದ ಕಾಫಿ ಮೂಟೆಗಳ ಕೆಳಗೆ ಅಕ್ರಮವಾಗಿ ಸಾಗಿಸುತ್ತಿದ್ದ 30 ಲಕ್ಷ ಕ್ಕೂ ಹೆಚ್ಚು ರೂ. ಮೌಲ್ಯದ ಬೀಟೆ ಮರದ ದಿಮ್ಮಿಗಳನ್ನು ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕೇರಳದ ಮಲಪುರಂ ಮೂಲದ ಲಾರಿ ಮಾಲೀಕ ಕಂ ಚಾಲಕ ಅಬ್ದುಲ್ ಶುಕೂರ್ ಬಂಧಿತ ಆರೋಪಿ.
ಲಾರಿ ಸಮೇತ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಈತ ಲಾರಿಯಲ್ಲಿ ಕಾಫಿ ಹಾಗೂ ಮರದ ಹೊಟ್ಟಿನ ಮೂಟೆಗಳ ನಡುವೆ ಅಡಗಿಸಿಟ್ಟಿದ್ದ ಸುಮಾರು 30 ಲಕ್ಷ ಮೌಲ್ಯದ 45 ಬೀಟೆ ದಿಮ್ಮಿಗಳನ್ನು ಸೀಸ್ ಮಾಡಲಾಗಿದೆ.
ಖಚಿತ ಮಾಹಿತಿ ಆಧರಿಸಿ ಡಿಸಿಎಫ್ ಕಿರುಬನಂತನ್, ಎಸಿಎಫ್ ಮಹದೇವಯ್ಯ ಅವರ ಮಾರ್ಗದರ್ಶನದಲ್ಲಿ ಆರ್ಎಫ್ಓ ಸಂತೋಷ್ ಎಂ. ಹೂಗಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಹುಣಸೂರು-ಎಚ್.ಡಿ.ಕೋಟೆ ರಸ್ತೆಯ ಆಜಾದ್ ನಗರದ ಪೆಟ್ರೋಲ್ ಬಂಕ್ ಬಳಿ ಕಾದು ಲಾರಿ ತಡೆದು ಪರಿಶೀಲಿಸಿದಾಗ ಅಕ್ರಮ ಬಯಲಾಗಿದೆ. ಲಾರಿ, ಮೊಬೈಲ್ ಹಾಗೂ ದಿಮ್ಮಿಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಚಾರಣೆ ವೇಳೆ ಕೊಡಗಿನ ವಿವಿಧೆಡೆಗಳಿಂದ ದಿಮ್ಮಿ ಖರೀದಿಸಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ.
ಈ ಜಾಲದಲ್ಲಿ ಹಲವರ ಕೈವಾಡವಿರುವ ಶಂಕೆ ಇದೆ. ಪ್ರಕರಣದ ಸೂತ್ರಧಾರಿ ಸೇರಿ ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಡಿಸಿಎಫ್ ಆರ್.ಟಿ. ಕಿರುಬನಂತನ್ ತಿಳಿಸಿದ್ದಾರೆ.
ಕೇರಳ ನೋಂದಣಿ ಲಾರಿ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದುಕೊಂಡು 2 ತಿಂಗಳ ಹಿಂದೆಯೇ ಆರೋಪಿ ಕರ್ನಾಟಕ ನೋಂದಣಿಯ ಸೆಕೆಂಡ್ ಹ್ಯಾಂಡ್ ಲಾರಿ ಖರೀದಿಸಿದ್ದ ಎಂಬದು ವಿಚಾರಣೆ ವೇಳೆ ಗೊತ್ತಸಗಿದೆ.
ಕಾರ್ಯಾಚರಣೆಯಲ್ಲಿ ಡಿಆರ್ಎಫ್ಓ ಮಂಜುನಾಥ ಟಿ.ಎನ್, ಗಸ್ತು ಅರಣ್ಯ ಪಾಲಕರಾದ ಶಿವಪ್ಪಗಡ್ಡದವರ್, ಮಂಜುನಾಥ, ದಿವಾಕರ, ಸಿದ್ದಪ್ಪಹೊಸಮನಿ, ಚಾಲಕ ಮನೋಹರ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.
