ಮೈಸೂರು: ಮೈಸೂರು ದಸರಾ ಚಲನಚಿತ್ರೋತ್ಸವ ರದ್ದು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಇಂದು ಕರ್ನಾಟಕ ಸೇನಾ ಪಡೆ ನೇತೃತ್ವದಲ್ಲಿ ಅಭಿಮಾನಿಗಳು ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿಗಳು ಈ ಬಾರಿ ದಸರಾವನ್ನು ಬಹಳ ಅದ್ದೂರಿಯಾಗಿ ಹಾಗೂ ವಿನೂತನವಾಗಿ ಮಾಡುತ್ತೇವೆ ಎಂದು ಹೇಳಿ ಈಗ ದಸರಾ ಚಲನಚಿತ್ರೋತ್ಸವ ರದ್ದು ಮಾಡಲು ಹೊರಟಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಹೇಳಿದರು.
ಇದು ಸರ್ಕಾರದ ಏಕಪಕ್ಷೀಯ ನಿರ್ಧಾರವಾಗಿದ್ದು, ಕನ್ನಡ ಚಿತ್ರರಂಗ, ಸ್ಥಳೀಯ ಕಲಾವಿದರು ಹಾಗೂ ಚಲನಚಿತ್ರ ಪ್ರೇಮಿಗಳಿಗೆ ಎಸಗಿರುವ ಘೋರ ಅನ್ಯಾಯವಾಗಿದೆ, ಇದನ್ನು ಕರ್ನಾಟಕ ಸೇನಾ ಪಡೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಹಲವಾರು ವರ್ಷಗಳಿಂದ ಈ ಚಲನಚಿತ್ರೋತ್ಸವವು ಮೈಸೂರು ದಸರೆಯ ಅವಿಭಾಜ್ಯ ಸಾಂಸ್ಕೃತಿಕ ಅಂಗವಾಗಿ, ಅರ್ಥಪೂರ್ಣ ಸಂದೇಶಗಳನ್ನು ಸಮಾಜಕ್ಕೆ ನೀಡುವ ಹಲವಾರು ಕನ್ನಡ ಸಿನಿಮಾಗಳನ್ನು ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಪ್ರದರ್ಶಿಸುತ್ತಾ ಬಂದಿದೆ.
ಚಲನ ಚಿತ್ರೋತ್ಸವದಿಂದ ನಷ್ಟ ಉಂಟಾಗುತ್ತದೆ, ಎನ್ನುವುದಕ್ಕೆ ಇದೇನು ವ್ಯಾಪಾರವಲ್ಲ, ಕಂಬಳದಿಂದ ಏನಾದರೂ ಲಾಭವಿದೆಯೇ,ಖಂಡಿತಾ ಇಲ್ಲಾ, ಕನ್ನಡ ಸಂಸ್ಕೃತಿಯನ್ನು ಯಾರಾದರೂ ವ್ಯಾಪಾರ ಮಾಡುತ್ತಾರೆಯೇ, ಚಿತ್ತೋತ್ಸವ ಯಶಸ್ವಿಗೊಳಿಸಲು ನಮ್ಮ ದೇಶದ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವುದು ಮುಖ್ಯ. ಚಿತ್ರರಂಗದ ಹಿರಿಯರು ಹಾಗೂ ಸಿನಿಮಾ ಗೆ ಸಂಬಂಧಪಟ್ಟವರನ್ನು, ಯಾರನ್ನೂ ಸಂಪರ್ಕಿಸದೆ, ಇಂತಹ ಪ್ರತಿಷ್ಠಿತ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು, ಕರ್ನಾಟಕ ಚಲನಚಿತ್ರ ಪರಂಪರೆಯ ಬಗ್ಗೆ ಸರ್ಕಾರಕ್ಕಿರುವ ಅಸಡ್ಡೆಯನ್ನು ತೋರುತ್ತದೆ
ಎಂದು ಟೀಕಿಸಿದರು.
ಒಂದು ಕಡೆ ಮುಖ್ಯಮಂತ್ರಿಗಳು ಈ ಬಾರಿ ದಸರಾ ಜಂಬೂ ಸವಾರಿಯಲ್ಲಿ ಕನ್ನಡ ಚಲನಚಿತ್ರರಂಗದ ತಾರೆಯರು ಆಗಮಿಸುತ್ತಾರೆ ಎಂದು ಹೇಳಿ, ಈ ಕಡೆ ದಸರಾ ಚಲನಚಿತ್ರವನ್ನು ರದ್ದು ಮಾಡಲು ಹೊರಟಿರುವುದು ಹಾಸ್ಯಸ್ಪದ.
ಈಗಿನ ದಿನಗಳಲ್ಲಿ, ಸಿನಿಮಾ ರಂಗವು ವಿಶ್ವದ ಎಲ್ಲ ಜನರನ್ನು ಸೆಳೆದಿರುವ ಒಂದು ಶಕ್ತಿಯುತ ಮಾಧ್ಯಮ. ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಸರ್ಕಾರ ಕೋಟ್ಯಂತರ ರೂ ವ್ಯಯಿಸಿ ಚಿತ್ರ ನಗರಿಯನ್ನು ಮೈಸೂರಿನಲ್ಲಿ ಸ್ಥಾಪಿಸಲು ಹೊರಟಿರುವ ಈ ಸಂದರ್ಭದಲ್ಲಿ ಚಲನಚಿತ್ರೋತ್ಸವವನ್ನು ರದ್ದು ಮಾಡುವ ಅವಶ್ಯಕತೆ ಏನಿತ್ತು ಎಂದು ತೇಜೇಶ್ ಲೋಕೇಶ್ ಗೌಡ ಪ್ರಶ್ನಿಸಿದರು.
ಸರ್ಕಾರ ಮೈಸೂರಿನಲ್ಲಿ ತೀವ್ರ ವಿರೋಧವಿದ್ದರೂ ಕೋಟ್ಯಾಂತರ ಖರ್ಚು ಮಾಡಿ ಕಂಬಳ ನಡೆಸುತ್ತಿದೆ, ಬಹಳಷ್ಟು ಜನರಿಗೆ ಸಹಾಯವಾಗುತ್ತಿದ್ದ ಹಾಗೂ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದ ಚಲನಚಿತ್ರವನ್ನು ರದ್ದು ಮಾಡುವ ಚಿಂತನೆಯಾದರೂ ಸರ್ಕಾರಕ್ಕೆ ಎಲ್ಲಿಂದ ಬಂತು. ಮಳೆ ಇಲ್ಲದೆ ಆತಂಕಕ್ಕೆ ಒಳಗಾಗಿರುವ ರೈತರು ಹಾಗೂ ಸ್ಥಳೀಯರು ಕಂಬಳವನ್ನು ವಿರೋಧಿಸುತ್ತಿದ್ದಾರೆ. 25 ಲಕ್ಷಕ್ಕೂ ಅಧಿಕ ಲೀಟರ್ ನೀರು ಬೇಕಿರುವ ಕಂಬಳದಿಂದ ಜನತೆಯು ತಿಳಿದುಕೊಳ್ಳುವುದಾದರೂ ಏನು ಎಂದು ಖಾರವಾಗಿ ಪ್ರಶ್ನಿಸಿದರು.
ಕೂಡಲೇ ಮುಖ್ಯಮಂತ್ರಿಗಳು ಎಂದಿನಂತೆ, ಈ ಬಾರಿಯೂ ದಸರಾ ಚಲನಚಿತ್ರೋತ್ಸವ ವನ್ನು ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ರವಾನಿಸಲಾಯಿತು.
ಚಲನ ಚಿತ್ರೋತ್ಸವ ಮಾಡದಿದ್ದ ಪಕ್ಷದಲ್ಲಿ ದಸರಾ ಉದ್ಘಾಟನೆಯ ದಿನವೇ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತೇಜೇಶ್ ಲೋಕೇಶ್ ಗೌಡ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಪ್ರಭುಶಂಕರ್ ಎಂ ಬಿ, ಸಿಂದುವಳ್ಳಿ ಶಿವಕುಮಾರ್, ಗಿರೀಶ್ ಹೆಚ್, ಶಿವಲಿಂಗಯ್ಯ, ನೇಹಾ, ಮಧುವನ ಚಂದ್ರು, ಮಲ್ಲೇಶ್, ಸೋಮೇಗೌಡ, ಸುಜಾತಾ, ಕುಮಾರ್ ಗೌಡ, ವರಕೂಡು ಕೃಷ್ಣೇಗೌಡ, ಬೋಗಾದಿ ಸಿದ್ದೇಗೌಡ , ಡಾ. ಶಾಂತರಾಜೇಅರಸ್, ರಾಧಾಕೃಷ್ಣ, ಹೊನ್ನೇಗೌಡ, ಪ್ರದೀಪ್, ತ್ಯಾಗರಾಜ್, ನಾಗರಾಜ್, ದರ್ಶನ್ ಗೌಡ, ಗಣೇಶ್ ಪ್ರಸಾದ್, ಹನುಮಂತೇಗೌಡ, ಆನಂದ್ ಗೌಡ ಬಸವರಾಜು, ಚಂದ್ರಶೇಖರ್, ಅರಸು, ದೇವೇಗೌಡ, ರಂಗಪ್ಪ, ನಾಗೇಶ್, ನಾರಾಯಣ್, ರವೀಶ್, ವಿಷ್ಣು ಸೇರಿದಂತೆ ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.
