ಮೈಸೂರು: ನಗರದ ಹಲವು ಕಡೆ ನಕಲಿ ದಾಖಲೆ ಸೃಷ್ಟಿಸಿ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿದ್ದು,ಈಗ ರಾಜಮನೆತನಕ್ಕೆ ಸೇರಿದ ಜಮೀನಿನ ವಿಚಾರದಲ್ಲಿ ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಮೈಸೂರಿನ ಕಸಬಾ ಹೋಬಳಿ ಕುರುಬರಹಳ್ಳಿಯ ಸರ್ವೆ ನಂಬರ್ ೪ರಲ್ಲಿ ಕಾನೂನುಬದ್ಧ ತಮ್ಮ ಸ್ವಾದೀನದಲ್ಲಿರುವ ಸುಮಾರು ೧೪ ಎಕರೆ ಭೂಮಿಗೆ ಸಂಬಂಧಿಸಿದಂತೆ ಕೆಲವರು ವಾಟ್ಸಾಪ್ ಮೂಲಕ ಸುಳ್ಳು ಸುದ್ದಿ ಹರಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಹಾಗೂ ಮೋಸದ ಮಾಹಿತಿಯನ್ನು ಹರಡುತ್ತಿದ್ದಾರೆ ಇದು ನನ್ನ ಗಮನಕ್ಕೆ ಬಂದಿದೆ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಒ.ಎಸ್.ಸಂಖ್ಯೆ ೧೪೦೦/೨೦೨೪ರಲ್ಲಿನ ಮೊಕದ್ದಮೆಗೆ ಸಂಬಂಧಿಸಿದಂತೆ ಮೈಸೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇದೆ. ಇದರಲ್ಲಿ ಆಸ್ತಿಯ ಸ್ವರೂಪ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮಧ್ಯಂತರ ಆದೇಶ ಜಾರಿಯಲ್ಲಿದೆ. ಜತೆಗೆ, ನ್ಯಾಯಾಲಯದಲ್ಲಿ ಈ ವಿಷಯವು ಪ್ರಸ್ತುತ ವಿಚಾರಣೆಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಲಲಿತ ಮಹಲ್ ಬಳಿಯ ಈ ೧೪ ಎಕರೆ ಭೂಮಿಯನ್ನು ನಮ್ಮ ಸ್ವ ಎಚ್ಚರಿಕೆ ಅಡಿಯಲ್ಲಿ ಜಂಟಿ ಉದ್ಯಮಕ್ಕಾಗಿ ನೀಡಲಾಗುತ್ತಿದೆ ಎಂದು ಸುಳ್ಳು ಹೇಳುವ ಸಂದೇಶದೊಂದಿಗೆ ಈ ವಿಡಿಯೋವನ್ನು ಸೇರಿಸಲಾಗಿದೆ ಮತ್ತು ಎನ್ಒಸಿ ಖಚಿತವಾಗಿದೆ ಎಂದು ಮತ್ತಷ್ಟು ಸುಳ್ಳು ಹೇಳಲಾಗಿದೆ.
ಈ ವಾಟ್ಸಾಪ್ ಸುದ್ದಿ ಸಂಪೂರ್ಣವಾಗಿ ಸುಳ್ಳು ಹಾಗೂ ಆಧಾರರಹಿತವಾಗಿದೆ. ಇದು ಸಾರ್ವಜನಿಕರನ್ನು ವಂಚಿಸಲು ಉದ್ದೇಶಪೂರ್ವಕ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ರಾಜಮಾತೆ ಹೇಳಿದ್ದಾರೆ.
ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ಹೇಳಲಾದ ವ್ಯಕ್ತಿಗಳ ವಂಚನೆ, ತಪ್ಪು ನಿರೂಪಣೆ ಮತ್ತು ಕ್ರಿಮಿನಲ್ ವಂಚನೆ ಮತ್ತು ಕಾನೂನು ಬಾಹಿರವಾಗಿ ದುರುಪಯೋಗಪಡಿಸಿ ಕೊಳ್ಳಲು ಉದ್ದೇಶಿಸಿರುವ ಕೃತ್ಯವೆಂದು ಹೇಳಬಹುದಾಗಿದೆ.
ಈ ಸಂಬಂಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಮತ್ತು ಈ ವ್ಯಕ್ತಿಗಳ ಇಂತಹ ಸುಳ್ಳು ನಿರೂಪಣೆಗಳ ಆಧಾರದ ಮೇಲೆ ವಂಚನೆಗೆ ಬಲಿ ಯಾಗಬೇಡಿ ಹಾಗೂ ಹೇಳಲಾದ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಹಿವಾಟಿನಲ್ಲಿ ಭಾಗವಹಿಸಬೇಡಿ ಎಂದು ಪ್ರಮೋದಾ ದೇವಿ ಒಡೆಯರ್ ಮನವಿ ಮಾಡಿದ್ದಾರೆ.
