ಮೈಸೂರು: ಮೈಸೂರಿನ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಬಸವ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಯಿತು.
ಜೆ.ಪಿ. ನಗರದಲ್ಲಿರುವ ಶ್ರೀ ಪೇಜಾವರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ಬಂಧುಗಳಿಗೆ ಡ್ರೈ ಫ್ರೂಟ್ಸ್,ಹಣ್ಣು ಹಂಪಲನ್ನು ವಿತರಿಸುವ ಸೇವಾ ಕಾರ್ಯದೊಂದಿಗೆ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅನುದಾನ ರಹಿತ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ ಮೂರ್ತಿ ‘ದಯವಿಲ್ಲದ ಧರ್ಮವಾವುದಯ್ಯ, ದಯವೇ ಧರ್ಮದ ಮೂಲವಯ್ಯ ಎಂದು ಸಾರಿ ವಚನ ಸಾಹಿತ್ಯಕ್ಕೆ ಚಳವಳಿಯ ರೂಪ ಕೊಟ್ಟು ಸಾಮಾಜಿಕ ತಾರತಮ್ಯ,ಜಾತಿ ವ್ಯವಸ್ಥೆ, ಶೋಷಣೆ ಮೂಢ ನಂಬಿಕೆಯ ವಿರುದ್ಧ ಸಮರ ಸಾರಿ ಸಮಾಜದ ಅಂಕು – ಡೊಂಕುಗಳನ್ನು ತಿದ್ದಿದ ಶ್ರೀ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆಯನ್ನು ಸೇವಾ ಕಾರ್ಯದ ಮೂಲಕ ಆಚರಿಸುತ್ತಿರುವ ಸ್ನೇಹ ಬಳಗದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಜೆ.ಡಿ.ಎಸ್. ಮುಖಂಡ ಪ್ರಕಾಶ್ ಪ್ರಿಯಾದರ್ಶನ್ ಮಾತನಾಡಿ,ಭಾರತೀಯ ಸಂಸ್ಕೃತಿಯ ಮಹಾನ್ ಚಿಂತಕರು, ಸಮಾಜ ಸುಧಾರಕರು, ಸಮಾನತೆಯ ಸಂದೇಶ ಸಾರಿದ ಧರ್ಮ ಗುರು ಹಾಗೂ ಶರಣ ಚಳವಳಿಯ ಮಹಾ ನಾಯಕರಾಗಿದ್ದ ಬಸವಣ್ಣನ ಜಯಂತಿಯನ್ನು ಆಚರಿಸುವುದು ಅವರನ್ನು ಗೌರವ ಪೂರ್ವಕವಾಗಿ ಸ್ಮರಿಸುವುದು ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಯುವ ಪೀಳಿಗೆಗೆ ಅವರ ಸಂದೇಶಗಳನ್ನು ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಪತ್ರಿಕ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಬ್ಲಡ್ ಆನ್ ಕಾಲ್ ಕ್ಲಬ್ ಮೈಸೂರು ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ, ಸಮಾಜ ಸೇವಕಿ ವಿದ್ಯಾ, ಅಶ್ವಿನಿ , ರಾಜೇಶ್ ಕುಮಾರ್,ಮಹೇಶ, ದತ್ತ ನಿಲಯ ಪಾಲಕರಾದ ಪುಟ್ಟಣ್ಣ, ಸತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
