ಮೈಸೂರು: ಡ್ರಗ್ಸ್ ಬಳಕೆ ಮಾಡುವುದು, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ, ಡ್ರಗ್ಸ್ ಬಳಕೆಯ ಅಪಾಯ ಕುರಿತು ಯುವಜನತೆಯಲ್ಲಿ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಜಿ ಲಕ್ಷ್ಮೀಕಾಂತ ರೆಡ್ಡಿ ಅವರು ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ನಾರ್ಕೋಟಿಕ್ ರಿಲೇಟೆಡ್ ಆಗಿ ಬಳಸುವ ಔಷಧಿಗಳ ಮಾರಾಟ ಕುರಿತ ಮಾಹಿತಿಯ ರಿಜಿಸ್ಟರ್ ಅನ್ನು ಮೆಡಿಕಲ್ ಶಾಪ್ ಗಳಲ್ಲಿ ಇಡಬೇಕು. ತಪ್ಪಿದಲ್ಲಿ ಮೆಡಿಕಲ್ ಶಾಪ್ ಗಳ ಮೇಲೆ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಸಿದರು.
ಮೈಸೂರು ಜಿಲ್ಲೆಯು ಡ್ರಗ್ಸ್ ಬಳಕೆ ಹೆಚ್ಚಾಗಿದೆ ಎಂದು ಕೆಟ್ಟ ಹೆಸರು ಬರುತ್ತಿದೆ. ಯುವಕ ಯುವತಿಯರು ಹೆಚ್ಚಾಗಿ ಡ್ರಗ್ ಅಡಿಕ್ಟ್ ಆಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕು ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸಿ ಎಂದು ಸೂಚಿಸಿದರು.
ಶಾಲಾ ಕಾಲೇಜು ಕ್ಯಾಂಪಸ್ ಗಳಲ್ಲಿ ತಪಾಸಣೆ ನಡೆಸಬೇಕು. ಡ್ರಗ್ಸ್ ಬಳಕೆ ಹಾಗೂ ಮಾರಾಟ ಕಂಡು ಬಂದರೆ ಕೂಡಲೇ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಡಿಸಿಪಿ ಸುಂದರ್ ರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
