ಮೈಸೂರು: ಬೇಸಿಗೆ ಸಮೀಪಿಸಿದೆ, ಕುಡಿಯುವ ನೀರಿನ ಸಮಸ್ಯೆ ಆಗಬಾರದು,ವಾರಕ್ಕೆ ಎರಡು-ಮೂರು ದಿನಗಳಿಗೆಮ್ಮೆಯಾದರು ನೀರು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಸೂಚಿಸಿದರು.
ಮೈಸೂರು ನಗರಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪಾಲಿಕೆ, ಹೂಟಗಳಿ ನಗರಸಭೆ, ರಮ್ಮನಹಳ್ಳಿ, ಕಡಕೊಳ, ಬೋಗಾದಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಹಾಗೂ ಕುಡಿಯುವ ನೀರಿಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಹಳೆಯ ಉಂಡುವಾಡಿ ಯೋಜನೆ ಕಾಮಗಾರಿ ಮುಗಿಯುವ ತನಕ ಕಬಿನಿ,ಕೆಆರ್ಎಸ್,ಮೇಳಾಪುರ ಯೋಜನೆಯಡಿ ನೀರು ಒದಗಿಸಬೇಕು. ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದನ್ನು ಗುರುತಿಸಿ ಟ್ಯಾಂಕರ್ ನೀರು ಪೂರೈಸಬೇಕು ಎಂದು ಹೇಳಿದರು.
ನಮ್ಮ ಹಂತದಲ್ಲಿ ಇದ್ದರೆ ಚರ್ಚಿಸಿ ಅದನ್ನು ಪರಿಹರಿಸುತ್ತೇವೆ. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳ ಹಂತದಲ್ಲಿ ಬಗೆಹರಿಸಲಾಗುವುದು. ಸರ್ದಾರ್ ವಲ್ಲಭಬಾಯ್ ಪಟೇಲ್,ವಸಂತನಗರ, ವೆಂಕಟೇಶ್ವರ ಬಡಾವಣೆ, ಮಾನಸಿನಗರ ಹಾಗೂ ಇದಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳಿಗೆ ನೀರು ಕೊಡಲು ಕ್ರಮ ಕೈಗೊಳ್ಳಬೇಕು.ವಸಂತನಗರ ಬಡಾವಣೆಯ ಜನರು ನಗರಪಾಲಿಕೆಗೆ ದುಡ್ಡು ಕಟ್ಟಿ ಮೂರು ವರ್ಷಗಳಾಗಿರುವ ಕಾರಣ ವಾರಕ್ಕೆ ಎರಡು ದಿನಗಳಿಗೊಮ್ಮೆಯಾದರೂ ನೀರು ಕೊಡಬೇಕು ಎಂದು ಸೂಚಿಸಿದರು.
ಶ್ರೀ ರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶ್ರೀನಗರದ ಡಿ ಬ್ಲಾಕ್ ನಲ್ಲಿ ಬೋರ್ವೆಲ್ ಬತ್ತಿ ಹೋಗಿ ನೀರು ಬರುತ್ತಿಲ್ಲವೆಂದು ಸಾರ್ವಜನಿಕರು ದೂರು ನೀಡಿದ್ದಾರೆ. ಬೆಳಿಗ್ಗೆಯಿಂದ ರಾತ್ರಿ ತನಕ ನಾಗರಿಕರು ನನಗೆ ಫೋನ್ ಮೇಲೆ ಫೋನ್ ಮಾಡುತ್ತಿದ್ದಾರೆ. ಅದೇ ರೀತಿ ಶ್ರೀರಾಂಪುರ,ಬೋಗಾದಿ ಭಾಗಗಳಿಂದಲೂ ನೀರಿನ ಸಮಸ್ಯೆ ಕುರಿತು ದೂರು ಬರುತ್ತಿದೆ. ಹಾಗಾಗಿ,ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕು. ಕಬಿನಿ ಯೋಜನೆಯಡಿ ಸ್ಥಳೀಯಸಂಸ್ಥೆಗಳಿಗೆ ಹಂಚಿಕೆಯಾಗಿರುವ ನೀರಿನ ಪ್ರಮಾಣ ಬಳಸಿಕೊಂಡು ಸಮರ್ಪಕವಾಗಿ ಪೂರೈಸಬೇಕು ಎಂದು ಹೇಳಿದರು.
ಯುಜಿಡಿ ಸಮಸ್ಯೆ ಬಗ್ಗೆ ದೂರು ಬಂದ ತಕ್ಷಣವೇ ಭೇಟಿ ನೀಡಿ ಪರಿಹರಿಸಬೇಕು.ಯುಜಿಡಿ ಕಂಪ್ಲೇಟ್ ಬಂದಾಕ್ಷಣ ಅಟೆಂಡ್ ಮಾಡಬೇಕು.ಇದನ್ನು ನಾವು ಹೇಳಿ ಮಾಡಿಸಬೇಕಾ ಎಂದು ಜಿಟಿಡಿ ಖಾರವಾಗಿ ಪ್ರಶ್ನಿಸಿದರು.
ವಿಜಯನಗರ 4ನೇ ಹಂತಕ್ಕೆ ಪ್ರತಿದಿನ ಹಂಚಿಕೆಯಾಗಿರುವಂತೆ 4 MLD ನೀರನ್ನು ಒದಗಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಮಳೆ ಅಭಾವದ ಬಗ್ಗೆ ಮುನ್ಸೂಚನೆ ಇದೆ. ಮಳೆ ಕಡಿಮೆಯಾಗುವ ಕಾರಣ ಈಗ ಸಮಸ್ಯೆ ಎದುರಾಗದಿದ್ದರೂ ಜೂನ್,ಜುಲೈ ತಿಂಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ಬೋರ್ವೆಲ್ಗಳನ್ನು ಕೊರೆಸಬೇಕು. ಬತ್ತಿ ಹೋಗಿರುವ ಬೋರ್ವೆಲ್ಗಳನ್ನು ರೀಡ್ರಿಲ್ ಮಾಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ನಗರ ಹಾಗೂ ನಗರಸಭೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಹದಿನೈದು ದಿನಗಳಿಗೊಮ್ಮೆ ಅಭಿಯಾನ ನಡೆಸಿ ಸ್ವಚ್ಛತೆ ಮಾಡಿಸಬೇಕು. ಪ್ರಮುಖ ರಸ್ತೆಗಳಲ್ಲಿ ಕಸ ಬೀಳದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಚಾಮುಂಡಿಬೆಟ್ಟದ ತಪ್ಪಲಿನ ಜೆಎಸ್ಎಸ್ ಆಯುರ್ವೇದ ಕಾಲೇಜಿಗೆ ಹೋಗುವ ರಸ್ತೆಯಲ್ಲಿ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಕಸ ಹಾಕಿದವರ ಮೇಲೆ ದಂಡ ವಿಧಿಸುವಂತೆ ಹೇಳಿದರೂ ಈತನಕ ಕೇಸ್ ಹಾಕಿಲ್ಲ. ರಸ್ತೆಯಲ್ಲಿ ತ್ಯಾಜ್ಯ ಬಿಸಾಡಿ ಹೋಗುವವರಿಗೆ ದಂಡ ಹಾಕಿದರೆ ಬೇರೆಯವರಿಗೆ ಪಾಠ ಕಲಿಸಬಹುದು ಎಂದು ಜಿಟಿಡಿ ಹೇಳಿದರು.
ಈ ವೇಳೆ ಡಿಸಿ ಪ್ರತಿಕ್ರಿಯಿಸಿ, ಚಾಮುಂಡಿಬೆಟ್ಟದ ತಪ್ಪಲಿನ ರಸ್ತೆಗಳಲ್ಲಿ ಕಸ ಸುರಿಯುತ್ತಿರುವ ಕುರಿತು ಸಾರ್ವಜನಿಕರು ದೂರು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ಸುದ್ದಿ ಬಂದಿದೆ.ತಕ್ಷಣ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಪಾಲಿಕೆ ಅಧೀಕ್ಷಕ ಅಭಿಯಂತರ ಮಂಜುನಾಥ್, ಹೂಟಗಳ್ಳಿ ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಎಚ್.ಎಂ.ಸುರೇಶ್, ಸುಜಯ್, ಮಹೇಶ್ ಎಚ್.ಆರ್.ದೀಪಾ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಅಭಿಯಂತರ ಮೊಹಮ್ಮದ್ ಆಸಿಫ್ ಇಕ್ಬಾಲ್,, ನಗರಪಾಲಿಕೆ ಒಳಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರ ಎ.ಎಂ. ಮೊಹಮ್ಮದ್ ಮುಸ್ತಫಾ, ಕಾರ್ಯಪಾಲಕ ಅಭಿಯಂತರ ನಾಗರಾಜು, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
