ಮೈಸೂರು: ಹಿರಿಯರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ, ಬಿಜೆಪಿ ಮುಖಂಡ ಸಂದೀಪ್ ಅವರು ತಿಳಿಸಿದರು.
ಮೈಸೂರಿನ ಶ್ರೀರಾಂಪುರದಲ್ಲಿರುವ ಬೆಳಕು ವಾತ್ಸಲ್ಯದಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯದರ್ಶನ ಸ್ನೇಹ ಬಳಗದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಹೊಸ ಸೀರೆ, ಡ್ರೈ ಫ್ರೂಟ್ಸ್,ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯರ ಸೇವೆ ದೇವರ ಸೇವೆ ಎಂಬ ನಾಣ್ನುಡಿಯಂತೆ ಈ ಮಹಾಶಿವರಾತ್ರಿ ಹಬ್ಬದಂದು ಹಿರಿಯರ ಸೇವಾ ಕಾರ್ಯದೊಂದಿಗೆ ನಾವುಗಳು ಧನ್ಯರಾಗಿದ್ದೇವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಜೀವನ ಶೈಲಿಯಿಂದ ಮಕ್ಕಳು ಯುವಕರಿಗೆ ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ,ಹಿರಿಯರು ನೀಡುತ್ತಿದ್ದ ಮಾರ್ಗದರ್ಶನ ಇಂದು ಇಲ್ಲವಾಗಿದೆ, ಹಿರಿಯರನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿಯಾಗಿದೆ, ಅವರ ಬದುಕು ಅತಂತ್ರವಾಗಿ ವೃದ್ಧಾಶ್ರಗಳಲ್ಲಿ ಆಶ್ರಯ ಪಡೆಯುವ ಸ್ಥಿತಿ ನಿರ್ಮಾಣವಾಗಿದ್ದು ಇಂತಹ ಹಿರಿಯ ತಾಯಂದಿರನ್ನು ಅತ್ಯಂತ ಕಾಳಜಿ ವಹಿಸಿ ಅವರೆಲ್ಲರಿಗೂ ಆಶ್ರಯ ನೀಡಿ ಆರೈಕೆ ಮಾಡುತ್ತಿರುವ ಬೆಳಕು ವಾತ್ಸಲ್ಯದಾಮದ ಸೇವೆ ಅಪಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರು ನಗರ ಜೆಡಿಎಸ್ ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್, ಗಾಯಕ ಯಶವಂತ್ ಕುಮಾರ್, ಸಿಂಚನಗೌಡ, ಎಂ ಮಾಧವಿ,ರಾಜೇಶ್ ಕುಮಾರ್,ಮಹೇಶ, ಸುರೇಂದ್ರ,ವಿಕಾಸ್,ಅಭಿನವ್, ದತ್ತ ಮತ್ತಿತರರು ಸೇವಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಸ್ನೇಹ ಬಳಗದ ಸದಸ್ಯರು ಹಿರಿಯರ ಆಶೀರ್ವಾದ ಪಡೆದು ಶಿವರಾತ್ರಿ ಹಬ್ಬದ ಶುಭಾಶಯ ಕೋರಿದರು.
