ಚಿತ್ರದುರ್ಗ: ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮಗಳು ನಡೆದರೆ ಜಿಲ್ಲಾಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದರು.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಶಾಸಕರು ಮುಂದಿಟ್ಟ ಕ್ಷೇತ್ರದ ಸಮಸ್ಯೆಗಳನ್ನು ಆಲಿಸಿದರು. ಶೀಘ್ರ ಬಗೆಹರಿಸಬಹುದಾದ ಸಮಸ್ಯೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಶಾಸಕರು ಹೇಳಿದ ಎಲ್ಲ ಅಂಶಗಳು ದಾಖಲಾಗಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ನೇಮಕಾತಿ ಪರ್ವ ನಡೆಯುತ್ತಿದೆ. ಸುಮಾರು 70 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಪರೀಕ್ಷೆ ನಡೆಯುವ ಕಡೆ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ತಯಾರಿಕೆ, ಹಂಚಿಕೆ ಹೀಗೆ ಪ್ರತಿಯೊಂದು ಹಂತವೂ ದಾಖಲೆಯಾಗಬೇಕು. ನೀಟ್ ಹಗರಣ ಎಲ್ಲರ ಗಮನದಲ್ಲಿರಲಿ. ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಬೇಕು. ಜನರು ಸರ್ಕಾರದ ಬಾಗಿಲಿಗೆ ಬರಬಾರದು. ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಸುಮ್ಮನೆ ತಕರಾರು ಮಾಡಿದರೆ ಕ್ರಮ ಕೈಗೊಳ್ಳುವೆ. ನಾನು ಕೊಟ್ಟ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೊಸ ಬೋರ್ ವೆಲ್ ಕೊರೆಯುವ ಮುಂಚಿನ ಹಾಗೂ ನಂತರದ ವಿಡಿಯೋ, ಫೋಟೋಗಳನ್ನು ದಾಖಲಿಸಬೇಕು. ಜಿಪಿಎಸ್ ಕೂಡ ನಮೂದಿಸಬೇಕು. ಬೋರ್ ವೆಲ್ ಆಳದ ಬಗ್ಗೆಯೂ ದಾಖಲಿಸಬೇಕು. 150 ಅಡಿ ಆಳ ಕೊರೆದು 500- 600 ಅಡಿ ಆಳ ಕೊರೆಯಲಾಗಿದೆ ಎಂದು ಅಕ್ರಮಕ್ಕೆ ಆಸ್ಪದ ನೀಡಬಾರದು ಎಂದು ಸಿಎಂ ಎಚ್ಚರಿಸಿದರು
ಹೊಸದಾಗಿ ಬೋರ್ ವೆಲ್ ಕೊರೆದರೆ, ದುರಸ್ತಿಗೊಳಿಸಿದರೆ ಪ್ರತಿಯೊಂದರ ಮಾಹಿತಿ ದಾಖಲಿಸಬೇಕು. ಹೊಸ ಬೋರ್ ವೆಲ್ ಕೊರೆದರೆ ಜಿಪಿಎಸ್ ಮಾಹಿತಿ ದಾಖಲಿಸಬೇಕು. ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಬಗ್ಗೆಯೂ ಮಾಹಿತಿಗಳು ಪಾರದರ್ಶಕವಾಗಿರಬೇಕು ಡಿ.ಕೆ.ಶಿವಕುಮಾರ್ ಸೂಚಿಸಿದರು.
ಎಲ್ ನೀನೋ ಪ್ರಭಾವದಿಂದಾಗಿ ರಾಜ್ಯದಲ್ಲಿ ಬಹುತೇಕ ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಿದ್ದು, ಈ ಬಾರಿಯ ಬರ ಪರಿಸ್ಥಿತಿಯನ್ನು ನಾವೆಲ್ಲರೂ ಟೀಮ್ ಕರ್ನಾಟಕವಾಗಿ ಎದುರಿಸೋಣ ಎಂದು ಕರೆ ನೀಡಿದರು.
ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಆಗ ಎಲ್ಲಾ ಮಂತ್ರಿಗಳು ಕೈ ಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಒಟ್ಟಾಗಿ ರಾಜ್ಯದ ಬರ ಪರಿಸ್ಥಿತಿ ಅವಲೋಕಿಸಬೇಕು. ರೈತರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಿಎಂ ಹೇಳಿದರು.
ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಾಗುವುದು. ದೆಹಲಿಯಲ್ಲಿ ಸೋಮವಾರ ಸಂಸದರ ಸಭೆ ನಡೆಸಲಾಗುವುದು ಎಂದು ಸಿಎಂ ಹೇಳಿದರು.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಾಹಣಾ ಸಮಿತಿ ಮುಂದೆ ಹೇಳಲಾಗಿದೆ. ಅವರಿಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ. ಪ್ರಧಾನಿ ಮೋದಿ ಅವರು ಸಹ ಎಲ್ ನೀನೋ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಈ ಎಚ್ಚರಿಕೆಯನ್ನು ನಾವು ಕಡೆಗಣಿಸಬಾರದು. ನಾನು ಸಹ ಪ್ರಧಾನಿಯವರಿಗೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಡಿಸಿಎಂ ಅವರೂ ಸಹ ಬರದ ಬಗ್ಗೆ ವಸ್ತುಸ್ಥಿತಿ ತಿಳಿಸಲು ಪ್ರಧಾನಿಯವರ ಬಳಿಗೆ ಶೀಘ್ರ ನಿಯೋಗ ಕಳುಹಿಸಲಿದ್ದಾರೆ ಎಂದು ಡಿಕೆಶಿ ಹೇಳಿದರು.
ಎಸ್ ಐಆರ್ ನಡೆಯುತ್ತಿದೆ. ಜನರು ಮತ ಕಳೆದುಕೊಳ್ಳಬಾರದು. ದಾಖಲೆಗಳಿಗೆ ಪರದಾಡಬಾರದು ಎಂದು ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಖಾಯಂ ನಿವಾಸಿ ಪತ್ರವನ್ನು ಸಹ ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಬೇಕು ಎಂದು ಸೂಚಿಸಿದರು.
ಶಾಸಕರ ಸಮಸ್ಯೆ ಆಲಿಸಲು ಇಬ್ಬರು ಅಧಿಕಾರಿಗಳ ನೇಮಕ ಮಾಡಿದ್ದೇನೆ. ಎಲ್ಲಾ ಶಾಸಕರು ನೇರವಾಗಿ ನನ್ನ ಬಳಿಯೇ ಯಾವುದೇ ಸಮಸ್ಯೆ ಇದ್ದರೂ ಹೇಳಬಹುದು. ಅದನ್ನು ಬಗೆಹರಿಸಲು ಆದಷ್ಟು ಪ್ರಯತ್ನ ಮಾಡುತ್ತೇನೆ. ಆಗಸ್ಟ್ ಎರಡನೇ ವಾರ ಅಥವಾ 6 ನೇ ತಾರೀಕು ವಿಧಾನಸಭೆ ಅಧಿವೇಶನ ನಡೆಯಬಹುದು. ಎಸ್ ಐಆರ್ ನಿಂದ ಅಧಿವೇಶನ ಮುಂದೂಡುವ ಪರಿಸ್ಥಿತಿ ಎದುರಾಯಿತು ಎಂದು ತಿಳಿಸಿದರು.
ಬೆಂಗಳೂರಿನಿಂದ ಹೊರ ಬಂದು ಬೇರೆ ಜಿಲ್ಲೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿರುವುದು ಹೊಸ ರೀತಿಯ ಆಲೋಚನೆ. ಇದರಿಂದ ನಮಗೂ ಹೊಸ ಹುರುಪು ಬಂದಿದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ಸಂತಸ ವ್ಯಕ್ತಪಡಿಸಿದರು.
ಮೊಣಕಾಲ್ಮೂರು ಶಾಸಕರಾದ ಗೋಪಾಲಕೃಷ್ಣ ಅವರು ನೀವು ಡೈನಾಮಿಕ್ ಇದ್ದೀರಿ. ಉತ್ತಮ ನೀರಾವರಿ ಯೋಜನೆಗಳ ಕುರಿತು ನಿರ್ದಾರ ಮಾಡಿ ಎಂದರೆ, ವಿಪಕ್ಷಗಳ ಶಾಸಕರಾದ ಅರಗ ಜ್ಞಾನೇಂದ್ರ ಅವರು, ರವಿಕುಮಾರ್ ಅವರೂ ಸಹ ಮೆಚ್ಚುಗೆ ಸೂಚಿಸಿದರು.
ಮೊದಲನೇ ಮತ್ತು ಮೂರನೇ ಶನಿವಾರ ಪ್ರತಿ ವಿಧಾನಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜನರ ಸಮಸ್ಯೆ ಆಲಿಸಬೇಕು, ಬಗೆಹರಿಸಬೇಕು. ಇದೇ ಪ್ರಜಾಸೇವಾ ಇಲಾಖೆಯ ಧ್ಯೇಯೋದ್ದೇಶ. ಪ್ರತಿ ಮನೆಗೂ ಸರ್ಕಾರ ತಲುಪುತ್ತಿದೆ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕು. ಜನರು ನೀಡಿದ ಅರ್ಜಿಗೆ ಪರಿಹಾರ ಸಿಗುವ ತನಕ ಅದರ ಬಗ್ಗೆ ಗಮನಹರಿಸಬೇಕು. ಸಚಿವರು ಎಲ್ಲಾ ಕ್ಷೇತ್ರಗಳಿಗೂ ಪ್ರವಾಸ ಮಾಡಬೇಕು. ಯಾವುದೇ ಪಕ್ಷದ ಶಾಸಕರಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹವಾಲು ಸ್ವೀಕರಿಸಿ, ಪರಿಹರಿಸಬೇಕು ಎಂದು ಮುಖ್ಯ ಮಂತ್ರಿಗಳು ತಿಳಿಸಿದರು.
