ಮೈಸೂರು: ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ದೇವರಾಜ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು,ಆರೋಪಿಯಿಂದ 15 ಲಕ್ಷ ರೂ. ಮೌಲ್ಯದ 33 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪಿರಿಯಾಪಟ್ಟಣ ತಾಲ್ಲೂಕು, ಹಾರನಹಳ್ಳಿ ಹೋಬಳಿ, ನಿಲುವಾಡಿ ಗ್ರಾಮದ ನಿಲುವಾಡಿ ಗೇಟ್ ಬಳಿಯ ನಿವಾಸಿ ಶ್ರೀನಿವಾಸ ಅಲಿಯಾಸ್ ಸೀನ (41) ಬಂಧಿತ ಆರೋಪಿ.
ಕೆ.ಆರ್. ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ಮೇ 25ರಂದು ದ್ವಿಚಕ್ರ ವಾಹನ ಕಳ್ಳತನವಾಗಿರುವ ಬಗ್ಗೆ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಆಗಸ್ಟ್ 14ರಂದು ಕಾಳಿದಾಸ ರಸ್ತೆಯ ಮಾರಮ್ಮ ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಯು ನಕಲಿ ಕೀ ಬಳಸಿ ವಾಹನಗಳನ್ನು ಕಳವು ಮಾಡುತ್ತಿದ್ದ.ನಂತರ ಕಳವು ಮಾಡಿದ ವಾಹನಗಳನ್ನು ಪಿರಿಯಾಪಟ್ಟಣ ತಾಲ್ಲೂಕಿನ ಚಿಕ್ಕನೇರಳೆ, ದೊಡ್ಡನೇರಳೆ, ಸಂತೆಮಾಳ, ಕೆಲ್ಲೂರು ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ.
ಇದು ಲೋನ್ ಕಟ್ಟದೇ ಸೀಜ್ ಆಗಿರುವ ವಾಹನ, ದಾಖಲೆಗಳನ್ನು ನಂತರ ಕೊಡುತ್ತೇನೆ ಎಂದು ಹೇಳಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ, ಬಂದ ಹಣವನ್ನು ತನ್ನ ವೈಯಕ್ತಿಕ ಹವ್ಯಾಸಗಳಿಗೆ ಬಳಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ಮೈಸೂರು ನಗರದ 7 ಠಾಣೆಗಳು, ಮೈಸೂರು ಜಿಲ್ಲೆಯ 3 ಠಾಣೆಗಳು ಹಾಗೂ ಹಾಸನ ಜಿಲ್ಲೆಯ ಒಂದು ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಒಟ್ಟು 33 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಪಿರಿಯಾಪಟ್ಟಣ ಠಾಣೆಯಲ್ಲಿ ಸುಲಿಗೆ ಪ್ರಕರಣವೂ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವರಾಜ – 9, ನಜರಾಬಾದ್ – 6, ಹುಣಸೂರು ಟೌನ್ – 7, ಮೇಟಗಳ್ಳಿ – 2, ವಿಜಯನಗರ – 2, ಕೆ.ಆರ್.ನಗರ – 2, ಜಯಲಕ್ಷ್ಮೀಪುರಂ – 1, ಅಶೋಕಪುರಂ – 1, ಕೃಷ್ಣರಾಜ – 1, ಹೆಚ್.ಡಿ.ಕೋಟೆ – 1, ಕೊಣನೂರು (ಹಾಸನ) – 1.ವಾಹನಗಳನ್ನು ಸೀನ ಕಳವು ಮಾಡಿದ್ದ.
ಮೈಸೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸುಂದರ್ ರಾಜ್, ದೇವರಾಜ ವಿಭಾಗದ ಎಸಿಪಿ ರಾಜೇಂದ್ರ ಕೆ ಅವರ ಮಾರ್ಗದರ್ಶನದಲ್ಲಿ, ದೇವರಾಜ ಠಾಣೆ ಇನ್ಸ್ಪೆಕ್ಟರ್ ರಘು ಕೆ.ಆರ್ ನೇತೃತ್ವದಲ್ಲಿ ಪಿಎಸ್ಐ ನಾಗರಾಜ ಎಸ್ ಮತ್ತು ಸಿಬ್ಬಂದಿಗಳಾದ ಮಂಜುನಾಥ ಆರ್.ಆರ್, ಮಂಜುನಾಥ ಎಂ.ಪಿ, ಮಧುಕೇಶ್ ಹೆಚ್.ವಿ, ಮಹೇಶ್ ವೈ.ಟಿ, ಮಂಜುನಾಥ ಹೆಚ್.ಆರ್, ಸುನೀಲ್ ಕುಮಾರ್ ಸಿ, ಮಹೇಶ್ ಕುಮಾರ್ ಎನ್.ಎಂ, ಶಿವರಾಜ್ ಕುಮಾರ್ ಹಾಗೂ ತಾಂತ್ರಿಕ ವಿಭಾಗದ ಕುಮಾರ್, ಮಂಜು ಸಿ.ಎಂ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.
ಆರೋಪಿ ಪತ್ತೆ ಕಾರ್ಯವನ್ನು ಮೈಸೂರು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
