ಕೊಪ್ಪಳ: ವಿದೇಶಿ ಮಹಿಳೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಮೂವರು ಯುವಕರಿಗೆ ಗಂಗಾವತಿಯ ಮೊದಲ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಕೊಪ್ಪಳ ಜಿಲ್ಲೆ, ಸಣಾಪುರದಲ್ಲಿ ವಿದೇಶಿ ಪ್ರಜೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.
ಒಡಿಶಾ ಮೂಲದ ವ್ಯಕ್ತಿಯ ಕೊಲೆ ಪ್ರಕರಣ ನಡೆದಿತ್ತು.ಇದು ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೆ ಸೋಮವಾರ ಮರಣದಂಡನೆ ಶಿಕ್ಷೆ ವಿಧಿಸಿದೆ.
ಮಲ್ಲೇಶ್ ಅಲಿಯಾಸ್ ಹಂದಿ ಮಲ್ಲ (22), ಸಾಯಿ ಅಲಿಯಾಸ್ ಚೈತನ್ಯ ಸಾಯಿ (21), ಹಾಗೂ ಶರಣಪ್ಪ ಅಲಿಯಾಸ್ ಶರಣ ಬಸವರಾಜ್ (27) ಅವರುಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.
ಫೆಬ್ರವರಿ 6 ರಂದು ಸದಾನಂದ ನಾಗಪ್ಪ ನಾಯಕ್ ನೇತೃತ್ವದ ನ್ಯಾಯಾಲಯವು ಮೂವರನ್ನು ದೋಷಿಗಳು ಎಂದು ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಇವತ್ತಿಗೆ ಕಾಯ್ದಿರಿಸಿತ್ತು.
ಮಲ್ಲೇಶ್ ಅಲಿಯಾಸ್ ಹಂದಿ ಮಲ್ಲ ಅಲಿಯಾಸ್ ಮಲ್ಲಯ್ಯ, ಸಾಯಿ ಅಲಿಯಾಸ್ ಚೈತನ್ಯ ಸಾಯಿ ಅಲಿಯಾಸ್ ಸಾಯಿಕುಮಾರ್ ಸ್ಥಳೀಯ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಪ್ಪಿತಸ್ಥರು.
ಸಾಯಿ ಅಲಿಯಾಸ್ ಚೈತನ್ಯ,ಶರಣಪ್ಪ ಅಲಿಯಾಸ್ ಶರಣ ಬಸವರಾಜ್ ಇಸ್ರೇಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಿಕ್ಷೆ ವಿಧಿಸಲಾಯಿತು.
ಅಲ್ಲದೆ ಶರಣಪ್ಪ ಅಲಿಯಾಸ್ ಶರಣಬಸವರಾಜ್ ಒಡಿಶಾ ಮೂಲದ ಪ್ರವಾಸಿ ಬಿಬಾಶ್ ಹತ್ಯೆ ಹಾಗೂ ಇಬ್ಬರು ವ್ಯಕ್ತಿಗಳನ್ನು ಕೊಲೆ ಮಾಡಲು ಯತ್ನಿಸಿದುದು ಸಾಬೀತಾಗಿದೆ.
ಮಾರ್ಚ್ 6 ರಂದು ರಾತ್ರಿ 10.30 ರ ಸುಮಾರಿಗೆ ಸಣಾಪುರ ಸರೋವರದ ಬಳಿ ಈ ಅಪರಾಧ ನಡೆದಿತ್ತು. ಹೋಂಸ್ಟೇ ಮಾಲೀಕರು ನಾಲ್ವರು ಅತಿಥಿಗಳನ್ನು – ಒಬ್ಬ ಮಹಿಳೆ ಸೇರಿದಂತೆ ಇಬ್ಬರು ವಿದೇಶಿಯರನ್ನು ಮತ್ತು ಇಬ್ಬರು ಭಾರತೀಯ ಪ್ರವಾಸಿಗರನ್ನು – ನಕ್ಷತ್ರ ವೀಕ್ಷಣೆಗಾಗಿ ತುಂಗಭದ್ರಾ ಕಾಲುವೆಯ ದಡಕ್ಕೆ ಕರೆದೊಯ್ದಿದ್ದರು.
ಮೋಟಾರ್ ಸೈಕಲ್ನಲ್ಲಿ ಬಂದ ಈ ಮೂವರು ಅಪರಾಧಿಗಳು ಮೊದಲು ಪೆಟ್ರೋಲ್ ಎಲ್ಲಿ ಸಿಗುತ್ತದೆ ಎಂದು ಕೇಳಿ ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು, ನಂತರ ಕೆಟ್ಟದಾಗಿ ವರ್ತಿಸಿ, ಗುಂಪಿನ ಮೇಲೆ ಹಲ್ಲೆ ನಡೆಸಿದ್ದರು, ಮೂವರು ಪುರುಷರನ್ನು ಕಾಲುವೆಗೆ ತಳ್ಳಿ, ಹೋಂಸ್ಟೇ ಮಾಲೀಕರು ಮತ್ತು ಇಸ್ರೇಲಿ ಮಹಿಳಾ ಪ್ರವಾಸಿಯ ಮೇಲೆ ಅತ್ಯಾಚಾರ ಮಾಡಿದ್ದರು.
ಕಾಲುವೆಗೆ ತಳ್ಳಲ್ಪಟ್ಟಾಗ ಬಿಬಾಶ್ ಎಂಬವರು ಮೃತಪಟ್ಟಿದ್ದರು.
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಚಿಸಿದ್ದ ವಿಶೇಷ ತಂಡಗಳು 48 ಗಂಟೆಗಳ ಒಳಗೆ ಇಬ್ಬರು ಆರೋಪಿಗಳಾದ ಮಲ್ಲೇಶ್ ಮತ್ತು ಸಾಯಿ ಅವರನ್ನು ಬಂಧಿಸಿದ್ದವು. ನಂತರ ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಶರಣಪ್ಪ ನನ್ನು ಬಂಧಿಸಲಾಗಿತ್ತು.
