ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ,ಈ ಬಾರಿ ನಾಡಹಬ್ಬದಲ್ಲಿ ಚಲನಚಿತ್ರ ದಸರಾವನ್ನು ರದ್ದುಪಡಿಸಿರುವ ಸರ್ಕಾರದ ನಿರ್ಧಾರ ಖಂಡನೀಯ ಎಂದು ಯುವ ಭಾರತ್ ಸಂಘಟನೆ, ಮೈಸೂರು ಸಂಚಾಲಕರಾದ
ಜೋಗಿ ಮಂಜು ತಿಳಿಸಿದ್ದಾರೆ.
ಚಲನಚಿತ್ರ ದಸರಾವನ್ನು ರದ್ದುಪಡಿಸುವ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸಿ,ಈ ವರ್ಷವೇ ಚಲನಚಿತ್ರ ದಸರಾವನ್ನು ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರ ವನ್ನು ಒತ್ತಾಯಿಸಿದ್ದಾರೆ.
ಪ್ರೇಕ್ಷಕರ ಸ್ಪಂದನೆ ಕಡಿಮೆಯಾಗಿದೆ ಎಂಬ ಕಾರಣವಿದ್ದರೆ, ಅದಕ್ಕೆ ಕಾರ್ಯಕ್ರಮವನ್ನು ರದ್ದುಪಡಿಸುವುದು ಪರಿಹಾರವಲ್ಲ, ಕಾರ್ಯಕ್ರಮದ ಗುಣಮಟ್ಟ ಹೆಚ್ಚಿಸಿ, ವ್ಯಾಪಕ ಪ್ರಚಾರ ನೀಡಿ, ಕನ್ನಡದ ಹಿರಿಯ ಕಲಾವಿದರು, ಯುವ ಪ್ರತಿಭೆಗಳು, ನಿರ್ದೇಶಕರು, ತಂತ್ರಜ್ಞರು ಹಾಗೂ ಚಿತ್ರಪ್ರೇಮಿಗಳನ್ನು ಒಳಗೊಳ್ಳುವ ಮೂಲಕ ಚಲನಚಿತ್ರ ದಸರಾವನ್ನು ಇನ್ನಷ್ಟು ಜನಪ್ರಿಯಗೊಳಿಸಬೇಕು ಎಂದು ಜೋಗಿ ಮಂಜು ಹೇಳಿದ್ದಾರೆ.
ಕನ್ನಡ ಚಿತ್ರರಂಗವು ನಮ್ಮ ನಾಡಿನ ಸಂಸ್ಕೃತಿಯ ಪ್ರಮುಖ ಭಾಗ. ಮೈಸೂರು ದಸರಾ ವೇದಿಕೆಯಲ್ಲಿ ಅದಕ್ಕೆ ಸೂಕ್ತ ಸ್ಥಾನ ನೀಡುವುದು ಸರ್ಕಾರದ ಜವಾಬ್ದಾರಿ.
ಸರ್ಕಾರ ಈ ನಿರ್ಧಾರವನ್ನು ಹಠಮಾರಿತನದಿಂದ ಮುಂದುವರಿಸದೆ, ಕನ್ನಡ ಚಿತ್ರರಂಗದ ಭಾವನೆಗಳಿಗೆ ಸ್ಪಂದಿಸಬೇಕು,ಚಲನಚಿತ್ರ ದಸರಾ ಉಳಿಯಲಿ ಕನ್ನಡ ಚಿತ್ರರಂಗ ಬೆಳೆಯಲಿ
ಮೈಸೂರು ದಸರಾ ಇನ್ನಷ್ಟು ವೈಭವದಿಂದ ಕಂಗೊಳಿಸಲಿ ಎಂದು ಜೋಗಿ ಮಂಜು ತಿಳಿಸಿದ್ದಾರೆ.
