ಮೈಸೂರು: ಕಲಾ ಉತ್ಸವ ಟ್ರಸ್ಟ್ ಮೈಸೂರು ಹಾಗೂ ಶ್ರೀ ಮಹಾಜನಾ ಸಭಾ ಟ್ರಸ್ಟ್ ಶ್ರೀರಾಮ ಮಂದಿರ ವತಿಯಿಂದ ಶ್ರೀ ರಾಮನವಮಿ ಅಂಗವಾಗಿ 8 ವರ್ಷದೊ ಳಗಿನ ಮಕ್ಕಳಿಗೆ ಶ್ರೀ ರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆ ಏರ್ಪಡಿಸಲಾಗಿದೆ.
ಮಾರ್ಚ್ 28ರಂದು ಬೆಳಗ್ಗೆ 11.30 ಕ್ಕೆ ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಶ್ರೀರಾಮ ಮಂದಿರದಲ್ಲಿ ಸ್ಪರ್ಧೆ ಹಮ್ಮಿಕೊಂಡಿದ್ದು ಅದರ ಪ್ರಚಾರ ಸಾಮಗ್ರಿಗಳನ್ನು ಈದಿನ ಶ್ರೀ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕರಾದ ನಾಡೋಜ ಡಾ. ಭಾಷ್ಯಂ ಸ್ವಾಮೀಜಿ ಅವರು ವಿಜಯನಗರದಲ್ಲಿರುವ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಿ ಶುಭ ಕೋರಿದರು.
ಈ ವೇಳೆ ಮಾತನಾಡಿದ ಅವರು, ದೈವ ಪುರುಷನಾದ ರಾಮನ ಬದುಕಿನ ಆದರ್ಶಗಳು ಎಲ್ಲ ಧರ್ಮದ ಯುವಜನರಿಗೆ ಸ್ಫೂರ್ತಿ ಎಂದು ಹೇಳಿದರು.
ಶ್ರೀರಾಮಚಂದ್ರನು ವನವಾಸಕ್ಕೆ ತೆರಳಿದಾಗ ಪತ್ನಿ ಸೀತಾಮಾತೆಯೂ ಕೂಡ ಜೊತೆಯಾಗಿ ಹೋಗುವ ಸನ್ನಿವೇಶ ಎಲ್ಲ ದಂಪತಿಗೆ ಅನೋನ್ಯತೆ ಸಂದೇಶದ ಆದರ್ಶವಾಗಿದೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದಾಗಲೂ ಪತಿ- ಪತ್ನಿ ಕೈಜೋಡಿಸಿ ಸಂಸಾರದ ನೌಕೆ ಸಾಗಿಸಬೇಕು ಎಂಬ ಅಮೂಲ್ಯ ಸಂದೇಶ ಅದು ಸಾರುತ್ತದೆ ಎಂದು ಹೇಳಿದರು.
ಜಯಂತಿಗಳು ಮೆರವಣಿಗೆ ಮಾಡುವುದರಿಂದ ಸಾರ್ಥಕ ಆಗುವುದಿಲ್ಲ. ಬದಲಿಗೆ ಮಹನೀಯರ ಆದರ್ಶಗಳನ್ನು ಬದುಕಿನಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದು ತಿಳಿಹೇಳಿದರು.
ಎಲ್ಲರೂ ಪ್ರತಿನಿತ್ಯ ಶ್ರೀರಾಮಾಯಣ, ಭಗವದ್ಗೀತೆ ನಿತ್ಯ ಪಠಿಸಬೇಕು,ಅದರಲ್ಲಿನ ಮಾನವೀಯ ಮೌಲ್ಯಗಳನ್ನು ಪಾಲಿಸಬೇಕು ಎಂದು ಭಾಷ್ಯಂ ಸ್ವಾಮೀಜಿ ಸಲಹೆ ನೀಡಿದರು.
ಕಲಾ ಉತ್ಸವ ಟ್ರಸ್ಟ್ ಮೈಸೂರು ಅಧ್ಯಕ್ಷ ಅಮಿತ್ ಮಾತನಾಡಿ 8 ವರ್ಷದ ಮಕ್ಕಳು
ಶ್ರೀರಾಮ ಹಾಗೂ ಸೀತೆ ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಪ್ರವೇಶ ಉಚಿತವಾಗಿರುತ್ತದೆ ಮಾಹಿತಿಗಾಗಿ 9880752727/ 7996021665 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ ಬಿ ಲಿಂಗರಾಜು, ಶೇಷಾದ್ರಿ, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ, ಅಮಿತ್, ಬಾಲಜಿ, ಶ್ರೀಧರ್ ಮತ್ತಿತರರು ಹಾಜರಿದ್ದರು.
