ಮೈಸೂರು: ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ಪೂಜ್ಯ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ದೀಕ್ಷಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ವೈದಿಕ ಮಂಗಳಘೋಷಗಳ ಮಧ್ಯೆ ಗೌರವಪೂರ್ವಕವಾಗಿ ಬಿಡುಗಡೆ ಮಾಡಲಾಯಿತು.
ಆಶ್ರಮದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಕ್ತರು, ಗಣ್ಯರು ಹಾಗೂ ಆಶ್ರಮದ ಪದಾಧಿಕಾರಿಗಳು ಭಾಗವಹಿಸಿ ಆಧ್ಯಾತ್ಮಿಕ ವಾತಾವರಣಕ್ಕೆ ಸಾಕ್ಷಿಯಾದರು.
ಈ ವೇಳೆ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು, ಚಾತುರ್ಮಾಸ್ಯವು ಭಾರತೀಯ ಸಂಸ್ಕೃತಿಯ ಮಹತ್ವದ ಆಧ್ಯಾತ್ಮಿಕ ಪರಂಪರೆಯಾಗಿದೆ ಎಂದು ತಿಳಿಸಿದರು.
ಆತ್ಮಶುದ್ಧಿ, ಧ್ಯಾನ, ಜಪ, ತಪಸ್ಸು ಹಾಗೂ ಧರ್ಮಚಿಂತನೆಗೆ ಚಾತುರ್ಮಾಸ್ಯದ ಅವಧಿ ಅತ್ಯಂತ ಪವಿತ್ರವಾದ ಸಮಯವಾಗಿದ್ದು, ಸಮಾಜದಲ್ಲಿ ಸಾತ್ವಿಕ ಚಿಂತನೆಗಳನ್ನು ಬೆಳೆಸುವಲ್ಲಿ ಇಂತಹ ವ್ರತಗಳಿಗೆ ಮಹತ್ವದ ಪಾತ್ರವಿದೆ ಎಂದು ಹೇಳಿದರು.
ಧರ್ಮ, ಸಂಸ್ಕೃತಿ ಮತ್ತು ಭಾರತೀಯ ಮೌಲ್ಯಗಳನ್ನು ಯುವಪೀಳಿಗೆಗೆ ತಲುಪಿಸುವ ಕಾರ್ಯದಲ್ಲಿ ಆಶ್ರಮಗಳು ಪ್ರಮುಖ ಪಾತ್ರವಹಿಸಬೇಕು ಎಂಬ ಸಂದೇಶವನ್ನೂ ಶ್ರೀಗಳು ನೀಡಿದರು.
ನಂತರ ಮಾತನಾಡಿದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು, ಗುರುಗಳ ಆಶೀರ್ವಾದದಿಂದ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಆಚರಿಸುವುದು ತಮ್ಮ ಜೀವನದ ಮಹತ್ತರ ಭಾಗವೆಂದು ಹೇಳಿದರು.
ಧರ್ಮಪ್ರಚಾರ, ವೇದ ಸಂಸ್ಕೃತಿ ಉಳಿವು ಹಾಗೂ ಸಮಾಜದಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಚಾತುರ್ಮಾಸ್ಯ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸ, ಮೂಡಾ ಮಾಜಿ ಅಧ್ಯಕ್ಷ ಹೆಚ್ ವಿ ರಾಜೀವ್, ಬ್ರಾಹ್ಮಣ ಮುಖಂಡ ಡಿ ಟಿ ಪ್ರಕಾಶ್, ಶ್ರೀ ಕಂಠಕುಮಾರ್, ಯುವ ಚಿಂತಕ ವಿಕಾಸ್ ಶಾಸ್ತ್ರಿ, ಆಶ್ರಮದ ಕಲ್ಯಾಣ್ ಚಕ್ರವರ್ತಿ, ಕೇಬಲ್ ಮಹೇಶ್, ಗೋಪಾಲ್ ಕೃಷ್ಣ ನಾಯಕ್ ಸೇರಿದಂತೆ ಅನೇಕ ಗಣ್ಯರು, ಭಕ್ತರು ಹಾಗೂ ಆಶ್ರಮದ ಸದಸ್ಯರು ಉಪಸ್ಥಿತರಿದ್ದರು.
