ಮೈಸೂರು: ರೈಲ್ವೆ ಸಂರಕ್ಷಣಾ ಪಡೆ ಮೈಸೂರು ಘಟಕವು ರೈಲ್ವೆ ಸಿಗ್ನಲ್ ಕೇಬಲ್ ಕಳವು ಪ್ರಕರಣವನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಕಳವಾದ ರೈಲ್ವೆ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಆಧಾರಿಸಿ,ಮೇ 5ರಂದು ಆರ್ಪಿಎಫ್ ಸಿಬ್ಬಂದಿ ಅಶೋಕಪುರಂ ಮತ್ತು ಕಡಕೊಳ ರೈಲು ನಿಲ್ದಾಣಗಳ ಮಧ್ಯೆ ನಿಗಾವಹಣೆ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ತಡೆದು ವಿಚಾರಣೆಗೆ ಒಳಪಡಿಸಿದ ವೇಳೆ ಅವರು ಕೇಬಲ್ ಕಳವು ಮಾಡುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾಋ.
ಚಿತ್ರದುರ್ಗ ಜಿಲ್ಲೆಯ ನಿವಾಸಿಗಳಾದ ರಘು (23) ಮತ್ತು ತಿಪ್ಪಣ್ಣ (55) ಬಂಧಿತ ಆರೋಪಿಗಳಲು.
ವಿಚಾರಣೆಯಲ್ಲಿ, ಆರೋಪಿಗಳು ಸುಮಾರು ಒಂದು ತಿಂಗಳ ಹಿಂದೆ 19 ಕೋಟಿ ರೈಲ್ವೆ ಸಿಗ್ನಲ್ ಕೇಬಲ್ ಸುಮಾರು 15 ಮೀಟರ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಘಟನೆಯ ಸಂದರ್ಭದಲ್ಲಿ ಅವರು ರಾಜ್ಯ ನೀರಿನ ಪೈಪ್ಲೈನ್ ಕಾಮಗಾರಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಹಾಗೂ ಗುಂಡಿ ಅಗೆಯುವ ವೇಳೆ ಹೊರಬಿದ್ದ ರೈಲ್ವೆ ಕೇಬಲ್ಗಳನ್ನು ಗಮನಿಸಿದ್ದರು.ಅವರು ಮುಂಜಾನೆ ಸಮಯದಲ್ಲಿ ಕೇಬಲ್ ಕಳವು ಮಾಡಿ, ಮೈಸೂರು ನಗರದ ಶ್ರೀನಗರ ಲೇಔಟ್ ಪ್ರದೇಶಕ್ಕೆ ಸಾಗಿಸಿ, ತಾಮ್ರವನ್ನು ಪಡೆಯಲು ಅದನ್ನು ಸುಟ್ಟು ಮಾರಾಟ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾರೆ.
ಸುಟ್ಟ ಕೇಬಲ್ ಅವಶೇಷಗಳು ಮತ್ತು ಪ್ಲಾಸ್ಟಿಕ್ ಚೀಲದಲ್ಲಿ ಬಚ್ವಿಟ್ಟಿದ್ದ ಸುಮಾರು 5 ಕಿಲೋಗ್ರಾಂ ತಾಮ್ರ ತಂತಿಯನ್ನು ವಶಪಡಿಸಿಕೊಂಡು ಜಪ್ತಿ ಮಾಡಲಾಗಿದೆ.
ಆರೋಪಿಗಳ ವಿರುದ್ಧ ಕಾನೂನಿನಡಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.
