(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಬೈಕ್ ಗೆ ಎದುರಿನಿಂದ ಬಂದ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಹಾಗೂ ಹಿಂಬದಿ ಸವಾರ ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟದ ಸಮೀಪ ನಡೆದಿದೆ.
ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದ ಪೊನ್ನಾಚಿ ಸಮೀಪದ ಮಾರೇಗೌಡನಹಳ್ಳಿಯ ಶಿವಪ್ಪ (24) ಹಾಗೂ ಸತೀಶ (22) ಎಂಬ ಅಪಘಾತದಲ್ಲಿ ಮೃತಪಟ್ಟ ಯುವಕರು.
ಇವರಿಬ್ಬರು ಕೌದಳ್ಳಿಗೆ ಬಂದು ಸಂಕ್ರಾಂತಿ ಹಬ್ಬಕ್ಕೆ ಸಾಮಾನುಗಳನ್ನು ಖರೀದಿಸಿ ವಾಪಸ್ ಬೈಕ್ ನಲ್ಲಿ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದ ವೇಳೆ ಮಂಗಳವಾರ ಸಂಜೆ 4 ಗಂಟೆ ಸಮಯದಲ್ಲಿ ಮಲೆ ಮಹದೇಶ್ವರ ಬೆಟ್ಟದ ಕಡೆಯಿಂದ ಬರುತ್ತಿದ್ದ ಬಸ್ ಮುಖಾ-ಮುಖಿ ಡಿಕ್ಕಿಯಾಗಿದೆ.
ಸ್ಥಳದಲ್ಲಿ ಹಬ್ಬಕ್ಕೆ ತಂದಿದ್ದ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಸ್ಥಳೀಯರು ಮಮ್ಮಕ ಮರುಗಿದರು.
ವಿಷಯ ತಿಳಿದ ಕೂಡಲೇ ರಾಮಾಪುರ ಸಿಪಿಐ ಚಿಕ್ಕ ರಾಚಶೆಟ್ಟಿ ಸಿಬ್ಬಂದಿಗಳೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಹನೂರು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಮಾಹಿತಿ ತಿಳಿದು ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುತ್ತುರಾಜ್ ಹಾಗು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
