ಪಾಕಿಸ್ತಾನ: ಪಾಕಿಸ್ತಾನ, ಬಲೂಚಿಸ್ತಾನದ ಮಸ್ತುಂಗ್ ಜಿಲ್ಲೆಯಲ್ಲಿ ಮಿಲಿಟರಿ ಬೆಂಗಾವಲು ಪಡೆಯ ಮೇಲೆ ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ ಭಾರೀ ದಾಳಿ ನಡೆಸಿದ್ದು,45 ಸೈನಿಕರು ಹತರಾಗಿದ್ದಾರೆ.
ನಿಷೇಧಿತ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಉಗ್ರಗಾಮಿ ಸಂಘಟನೆ ಈ ಸಂಘಟಿತ ದಾಳಿಯ ಹೊಣೆ ಹೊತ್ತುಕೊಂಡಿದೆ.
ಖಾದ್ ಕೂಚಾ ಪ್ರದೇಶದ ಹೆದ್ದಾರಿಯಲ್ಲಿ ರಜೆಯಲ್ಲಿದ್ದ ಮಿಲಿಟರಿ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ಬಸ್ಗಳನ್ನು ಗುರಿಯಾಗಿಸಿ ಶಸ್ತ್ರಸಜ್ಜಿತ ಪ್ರತ್ಯೇಕತಾವಾದಿಗಳು ದಾಳಿ ನಡೆಸಿದ್ದಾರೆ.
ಉಗ್ರರು ಸೈನಿಕರಿದ್ದ ಒಂದು ಮಿಲಿಟರಿ ಕೋಚ್ ಬಸ್ಗೆ ಸಂಪೂರ್ಣವಾಗಿ ಬೆಂಕಿ ಹಚ್ಚಿದ್ದಾರೆ, ನಂತರ ಪಾಕಿಸ್ತಾನಿ ಸೇನೆ ಮತ್ತು ಉಗ್ರರ ನಡುವೆ ಸುದೀರ್ಘ ಹಾಗೂ ಭೀಕರ ಗುಂಡಿನ ಚಕಮಕಿ ನಡೆದಿದೆ.
ನಾವು ಸೈನಿಕರನ್ನು ಸಾಗಿಸುತ್ತಿದ್ದ ಬಸ್ಗಳನ್ನು ಧ್ವಂಸಗೊಳಿಸಿದ್ದೇವೆ. ಸ್ಥಳದಲ್ಲೇ 45 ಕ್ಕೂ ಹೆಚ್ಚು ಸೈನಿಕರು ಸತ್ತಿದ್ದು, ಹತ್ತಾರು ಸೈನಿಕರು ಗಾಯಗೊಂಡಿದ್ದಾರೆ. ಘರ್ಷಣೆಗಳು ಇನ್ನೂ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಬಿಎಲ್ಎ ಹೇಳಿಕೊಂಡಿದೆ.
ಉಗ್ರಗಾಮಿ ಸಂಘಟನೆಯು 45 ಸೈನಿಕರು ಸತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದರೂ, ಪಾಕಿಸ್ತಾನಿ ಅಧಿಕಾರಿಗಳು ಈ ಅಂಕಿಅಂಶಗಳನ್ನು ಇನ್ನು ಅಧಿಕೃತವಾಗಿ ದೃಢಪಡಿಸಿಲ್ಲ
ಈ ಭೀಕರ ದಾಳಿಯ ಬೆನ್ನಲ್ಲೇ ಪಾಕಿಸ್ತಾನಿ ಭದ್ರತಾ ಪಡೆಗಳು ಇಡೀ ಮಸ್ತುಂಗ್ ಜಿಲ್ಲೆಯನ್ನು ಸುತ್ತುವರೆದಿದ್ದು, ಉಗ್ರರ ಪತ್ತೆಗಾಗಿ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿವೆ. ಭದ್ರತಾ ಕಾರಣಗಳಿಗಾಗಿ ಪ್ರಮುಖ ಕ್ವೆಟ್ಟಾ-ಕರಾಚಿ ಹೆದ್ದಾರಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
