ಬೆಂಗಳೂರು: ಶುಕ್ರವಾರ ನಡೆಯಲಿರುವ ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆಯನ್ನು ಬಿಜೆಪಿ ಬಹಿಷ್ಕರಿಸಲೆದೆ
ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಆದರೆ ಚುನಾವಣೆ ಬಳಿಕ ಪೀಠಕ್ಕೆ ಎಂದಿನಂತೆಯೇ ಗೌರವದಿಂದ ನಡೆದುಕೊಳ್ಳುತ್ತೇವೆ. ಇದು ಕಾಂಗ್ರೆಸ್ನ ಸರ್ವಾಧಿಕಾರದ ವಿರುದ್ಧದ ಪ್ರತಿಭಟನೆ ಎಂದು ಅಶೋಕ ತಿಳಿಸಿದರು.
ವಿಧಾನಸಭೆ ಕಲಾಪದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯ ಸಭಾಧ್ಯಕ್ಷರ ಚುನಾವಣೆ ಶುಕ್ರವಾರ ನಡೆಯಲಿದೆ. ಸದನಕ್ಕೆ ಸಾರ್ವಭೌಮತ್ವ ಇದೆ ಹಾಗೂ ವಿಧಾನಸಭಾ ಸದಸ್ಯರಿಗೆ ಹಕ್ಕು ಇದೆ. ಆದರೆ ಕಾಂಗ್ರೆಸ್ ಪಕ್ಷ ಸಂವಿಧಾನ ಬಾಹಿರವಾಗಿ ತನ್ನ ಲೆಟರ್ಹೆಡ್ನಲ್ಲಿ ಆಯ್ಕೆ ಮಾಡಲಾಗುವ ಸಭಾಧ್ಯಕ್ಷರ ಹೆಸರನ್ನು ಉಲ್ಲೇಖ ಮಾಡಿದೆ. ಸದನದ ಸಾರ್ವಭೌಮತ್ವವನ್ನು ಕಸಿಯುವ ಕೆಲಸವನ್ನು ದೆಹಲಿಯ ನಕಲಿ ಗಾಂಧಿ ಕುಟುಂಬ ಮಾಡಿದೆ ಎಂದು ಟೀಕಾಪ್ರಹಾರ ನಡೆಸಿದರು.
ಪಕ್ಷದ ಪಟ್ಟಿಯಲ್ಲಿ ಸ್ಪೀಕರ್ ಹೆಸರನ್ನು ಪ್ರಕಟಿಸುವ ಹೊಸ ಸಂಪ್ರದಾಯವನ್ನು ಹುಟ್ಟುಹಾಕಲಾಗಿದೆ. ಸಭಾಧ್ಯಕ್ಷರು ಸದನದಿಂದ ಚುನಾಯಿತರಾಗಬೇಕಿದ್ದರೂ, ಪಕ್ಷದಿಂದಲೇ ಚುನಾಯಿತರನ್ನಾಗಿ ಮಾಡಲಾಗಿದೆ ಇದು ಪ್ರಜಾಪ್ರಭುತ್ವ ವಿರೋಧಿ ನೀತಿ ಎಂದು ಗುಡುಗಿದರು ಅಶೋಕ್.
ವಿಧಾನಪರಿಷತ್ ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ ಅವರು ರಾಜೀನಾಮೆ ನೀಡುತ್ತೇನೆ ಎಂದಿದ್ದರೂ ಅವರ ಕಚೇರಿಗೆ ಶಾಸಕರು ನುಗ್ಗಿ ರಾಜೀನಾಮೆ ಪಡೆದಿದ್ದಾರೆ. ಇದು ಕೂಡ ಸಂವಿಧಾನಕ್ಕೆ ಮಾಡಿರುವ ಅಪಚಾರ ಎಂದು ಆರೋಪಿಸಿದರು.
ಇಲ್ಲಿನ ಹೊಸ ಸಭಾಪತಿ ಹಾಗೂ ಉಪಸಭಾಪತಿಗಳ ಹೆಸರನ್ನು ಕೂಡ ಪಕ್ಷದ ಪಟ್ಟಿಯಲ್ಲಿ ತೋರಿಸಲಾಗಿದೆ. ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಉಪ ಸಭಾಧ್ಯಕ್ಷ ಎಂದು ತೋರಿಸಲಾಗಿತ್ತು. ನಂತರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದು ಸರಿ ಎಂದು ತಿಳಿಸದೆ ಗೊಂದಲದ ಗೂಡು ಮಾಡಿದ್ದಾರೆ. ಇವೆಲ್ಲವೂ ಸದನದ ನೀತಿ ನಿಯಮಗಳನ್ನು ಮೀರಿದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಕಿಡಿಕಾರಿದರು.
ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಕಾಂಗ್ರೆಸ್ ಅಪಚಾರ ಮಾಡಿರುವುದರಿಂದ ವಿಧಾನಸಭಾಧ್ಯಕ್ಷರ ಆಯ್ಕೆಯ ಚುನಾವಣೆಯನ್ನು ಬಿಜೆಪಿ ಬಹಿಷ್ಕಾರ ಮಾಡಲಿದೆ,ಚುನಾವಣೆಯಲ್ಲಿ ನಾವು ಭಾಗಿಯಾಗುವುದಿಲ್ಲ ಆದರೆ ಚುನಾವಣೆಯ ನಂತರ ಮಾತ್ರ ಪೀಠಕ್ಕೆ ಗೌರವದಿಂದ ನಡೆದುಕೊಳ್ಳುತ್ತೇವೆ. ಇದು ಪೀಠದ ವಿರುದ್ಧವಲ್ಲ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.
