ಚಾಮರಾಜನಗರ: ಜನನ ಮರಣ ಘಟನೆಗಳ ನೊಂದಣಿಯನ್ನು ನಿಗದಿತ ಪ್ರಾಧಿಕಾರಕ್ಕೆ ಕ್ರಮಬದ್ದವಾಗಿ ಹಾಗೂ ಕಾಲಕಾಲಕ್ಕೆ ವರದಿ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಾಗರಿಕ ನೊಂದಣಿ ಪದ್ದತಿ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಜನನ ಮರಣ ಘಟನೆಗಳನ್ನು ಪ್ರತಿ ತಿಂಗಳ ೫ನೇ ತರೀಖಿನೊಳಗೆ ನಿಗದಿತ ನಮೂನೆಯಲ್ಲಿ ಸಲ್ಲಿಸಬೇಕು. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ನೊಂದಣಾಧಿಕಾರಿಗಳು ಸೂಚಿತ ಅವಧಿಯೊಳಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಭವಿಸುವ ಜನನ ಮರಣ ಘಟನೆಗಳನ್ನು ೨೧ ದಿನಗಳೊಳಗೆ ನೊಂದಣಿ ಮಾಡಬೇಕಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಸಹ ಜನನ ಮರಣ ಘಟನೆಗಳನ್ನು ಸಂಭವಿಸಿದ ೨೧ ದಿನಗಳೊಳಗೆ ನೊಂದಣಿ ಮಾಡಲು ಅನುವಾಗುವಂತೆ ಜನನ ಮರಣ ನೊಂದಣಾಧಿಕಾರಿಗಳಿಗೆ ವರದಿ ಮಾಡಬೇಕು ಎಂದು ಹೇಳಿದರು.
ನೊಂದಣಾಧಿಕಾರಿಗಳು, ಉಪ ನೊಂದಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ಪಟ್ಟಿ ಮಾಡಿಕೊಂಡು ೨೧ ದಿನಗಳಲ್ಲಿ ವರದಿ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಜನನ ಮರಣ ನೊಂದಣಿ ಅಧಿನಿಯಮದ ಸೆಕ್ಷನ್ ೧೨ರನ್ವಯ ನೊಂದಣಾಧಿಕಾರಿಗಳು, ಉಪ ನೊಂದಣಾಧಿಕಾರಿಗಳು ಘಟನೆಗಳ ನೊಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಬಂಧಪಟ್ಟ ಮಾಹಿತಿದಾರರಿಗೆ ಪ್ರಮಾಣ ಪತ್ರವನ್ನು ಒದಗಿಸಬೇಕು. ಪ್ರಮಾಣ ಪತ್ರಕ್ಕೆ ನಿಗದಿ ಪಡಿಸಲಾಗಿರುವ ಶುಲ್ಕವನ್ನು ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಜನನ ಮರಣ ನೊಂದಣಿ ಮಾಡುವಾಗ ದಿನಾಂಕ, ಹೆಸರು, ಆಧಾರ್ ಸಂಖ್ಯೆ, ಗ್ರಾಮದ ಹೆಸರು ಇನ್ನಿತರ ವಿವರಗಳು ತಪ್ಪಾಗಿ ನಮೂದಾಗದಂತೆ ಎಚ್ಚರವಹಿಸಬೇಕು. ನಿಯಮಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು. ನಾಗರಿಕ ನೊಂದಣಿ ಪದ್ದತಿಯನ್ನು ಉತ್ತಮ ಪಡಿಸಲು ಜನನ ಮರಣ ನೊಂದಣಿ ಕುರಿತ ಸಭೆಯನ್ನು ತಾಲೂಕು ಮಟ್ಟದಲ್ಲಿಯೂ ಪ್ರತಿ ತಿಂಗಳು ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಸಂಖ್ಯಾ ಸಂಗ್ರಹಣಾ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಜನನ ಮರಣ ನೊಂದಣಾಧಿಕಾರಿ ಪವನ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಕುಮಾರ್, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
