ಮೈಸೂರು: ನಕಲಿ ಒಡವೆಗಳನ್ನ ಗಿರವಿ ಇಟ್ಟು ಖಾಸಗಿ ಬ್ಯಾಂಕ್ ಗೆ ವಂಚಿಸಿದ ಆರೋಪದ ಮೇಲೆ ಚಿನ್ನಾಭರಣ ಮೌಲ್ಯಮಾಪಕ ಸೇರಿದಂತೆ 7 ಮಂದಿ ವಿರುದ್ದ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ತಮಿಳುನಾಡು ಮೂಲದ ಮರ್ಕೆಂಟೈಲ್ ಬ್ಯಾಂಕ್ ಗೆ ವಂಚಕರು 56.78 ಲಕ್ಷ ರೂ ವಂಚಿಸಿದ್ದಾರೆ
ಬ್ಯಾಂಕ್ ನ ಮುಖ್ಯಸ್ಥರಾದ ಸುರೇಶ್ ಕಣ್ಣನ್ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಮೈಸೂರಿನ ಅಬ್ದುಲ್ ಜಮೀಲ್, ಮಂಡ್ಯದ ಸಾಗರ್, ಪುಟ್ಟರಾಜು, ರವಿಕುಮಾರ್, ಈತನ ಪತ್ನಿ ದಿವ್ಯ, ಬೆಂಗಳೂರಿನ ನಾಗರತ್ನರೆಡ್ಡಿ ಹಾಗೂ ಮೌಲ್ಯಮಾಪಕ ಟಿ.ನರಸೀಪುರದ ರವೀಂದ್ರ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.
ಆರೋಪಿಗಳು 14-03-2024 ರಂದು 6 ಆರೋಪಿಗಳ ಹೆಸರಲ್ಲಿ ಒಟ್ಟು 782 ಗ್ರಾಂ ಚಿನ್ನಾಭರಣ ಗಿರವಿ ಇಟ್ಟು 56,78,000 ರೂ. ಸಾಲ ಪಡೆದಿದ್ದಾರೆ.
ಆರೋಪಿಗಳ ಚಿನ್ನಾಭರಣವನ್ನ ರವೀಂದ್ರ ಕುಮಾರ್ ಪರಿಶೀಲಿಸಿ ಅಸಲಿ ಚಿನ್ನವೆಂದು ಅಧಿಕೃತವಾಗಿ ಸರ್ಟಿಫೈ ಮಾಡಿದ್ದಾರೆ.
ಈ ಆಧಾರದ ಮೇಲೆ ಗಿರವಿ ಸಾಲ ನೀಡಲಾಗಿದೆ.ಜನವರಿ 14.2026ರಂದು ಮರುಮೌಲ್ಯಮಾಪನ ಮಾಡಲು ರಮೇಶ್ ಎಂಬುವರು ಬ್ಯಾಂಕ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ನಕಲಿ ಚಿನ್ನವೆಂದು ಗೊತ್ತಾಗಿದೆ.
7 ಮಂದಿ ವಿರುದ್ದ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
