ಬ್ಯಾಂಕಾಕ್: ಥಾಯ್ಲೆಂಡ್ನ ರಾಜಧಾನಿ ಬ್ಯಾಂಕಾಕ್ನ ಉತ್ತರ ಭಾಗದಲ್ಲಿರುವ ನಾ ಲಾಡ್ಪ್ರಾವೋ ಪಬ್ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟಿದ್ದು, 63ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕ್ಷಣಾರ್ಧದಲ್ಲ ಇಡೀ ಪಬ್ ಆವರಿಸಿದೆ,ಜತೆಗೆ ಹೊಗೆ ಆವರಿಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಯಿತು.
ಬೆಂಕಿ ಹೊತ್ತಿಕೊಂಡ ಕೂಡಲೇ ಪಬ್ ನಲ್ಲಿ ದ್ದವರು ಜೀವ ಉಳಿಸಿಕೊಳ್ಳಲು ಹೊರಗೆ ಓಡುತ್ತಿದ್ದರು.
ಥಾಯ್ಲೆಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಗ್ನಿ ಅವಘಡದಲ್ಲಿ ಮೃತಪಟ್ಟ ಹಲವರ ಮೃತದೇಹಗಳು ಪಬ್ನ ಹಿಂಭಾಗದಲ್ಲಿದ್ದ ಶೌಚಾಲಯಗಳ ಬಳಿ ಪತ್ತೆಯಾಗಿವೆ.
ವೇದಿಕೆಯ ಸಮೀಪದ ವಿದ್ಯುತ್ ಸರ್ಕ್ಯೂಟ್ ಬ್ರೇಕರ್ನಿಂದ ಮೊದಲು ಹೊಗೆ ಕಾಣಿಸಿಕೊಂಡಿತ್ತು. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡು, ದೊಡ್ಡ ಸ್ಫೋಟ ಉಂಟಾಯಿತು ಎಂದು ಪಬ್ ನಲ್ಲಿದ್ದ ಸಂಗೀತಗಾರ ತಿಳಿಸಿದ್ದಾರೆ.
ಬ್ಯಾಂಕಾಕ್ ಗವರ್ನರ್ ಚಾಡ್ಚಾರ್ಟ್ ಸಿಟ್ಟಿಪುಂಟ್ ಅವರು ಮಾತನಾಡಿ, 63 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ 22 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಅಗ್ನಿಶಾಮಕ ಸಿಬ್ಬಂದಿ ಸುಮಾರು 30 ನಿಮಿಷಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯ ನಂತರ ಪಬ್ನ ಒಳಭಾಗ ಸಂಪೂರ್ಣ ಸುಟ್ಟು ಕರಕಲಾಗಿರುವ ದೃಶ್ಯಗಳು ಕಂಡುಬಂದಿವೆ.
ಇದೇ ವೇಳೆ, ಘಟನಾ ಸ್ಥಳದಲ್ಲಿ ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮಾಹಿತಿ ತಿಳಿದುಕೊಳ್ಳಲು ಬಂದವರಿಗಾಗಿ ವಿಶೇಷ ನೋಂದಣಿ ಕೇಂದ್ರವನ್ನೂ ತೆರೆಯಲಾಗಿದೆ.
2022ರಲ್ಲೂ ಥಾಯ್ಲೆಂಡ್ನ ಪೂರ್ವ ಭಾಗದ ಸಂಗೀತ ಪಬ್ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು,ಆಗ 14 ಮಂದಿ ಮೃತಪಟ್ಟಿದ್ದರು. 2009ರ ಜನವರಿ 1ರಂದು ಬ್ಯಾಂಕಾಕ್ನ ಸಾಂಟಿಕಾ ನೈಟ್ಕ್ಲಬ್ನಲ್ಲಿ ಹೊಸ ವರ್ಷದ ಸಂಭ್ರಮದ ವೇಳೆ ಒಳಾಂಗಣ ಪಟಾಕಿ ಪ್ರದರ್ಶನದಿಂದ ಸಂಭವಿಸಿದ ಅಗ್ನಿ ಅವಘಡದಲ್ಲಿ 66 ಮಂದಿ ಸಾವನ್ನಪ್ಪಿದ್ದರು.
