ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ಪಾರ್ಕಿಂಗ್ ಮಾಫಿಯಾ ತಲೆ ಎತ್ತಲು ಮುಂದಾಗಿರುವ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪಾರ್ಕಿಂಗ್ ಮಾಫಿಯಾ ಧೋರಣೆಗೆ ಆಮ್ ಆದ್ಮಿ ಪಕ್ಷ ಕಟುವಾಗಿ ಟೀಕಿಸಿದೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ.ಸತೀಶ್ ಕುಮಾರ್ ಮಾತನಾಡಿ ಡಿ.ಕೆ. ಶಿವಕುಮಾರ್ ಅವರ ತಲೆಕೆಟ್ಟ ಹಾಗೂ ಜೇಬಿಗೆ ಕನ್ನ ಹಾಕುವ ನೀತಿಯಿಂದಾಗಿ ಬೆಂಗಳೂರಿಗರು ಮತ್ತೆ ಪಾರ್ಕಿಂಗ್ ಮಾಫಿಯಾಗೆ ಬಲಿಯಾಗುವ ಪರಿಸ್ಥಿತಿ ಬಂದಿದೆ ಎಂದು ಕಿಡಿಕಾರಿದರು.
ಈಗಾಗಲೇ ಬೆಂಗಳೂರಿನ ಐದು ಪಾಲಿಕೆಗಳು ಈ ಬಗ್ಗೆ ಟೆಂಡರ್ ಕರೆದಿರುವುದು ಕಾಂಗ್ರೆಸ್ ಸರ್ಕಾರವು ನೇರವಾಗಿ ಬೆಂಗಳೂರಿಗರ ಜೇಬಿಗೆ ಕನ್ನ ಹಾಕುವಂತಿದೆ. ಈಗಾಗಲೇ ಪಾಲಿಕೆ ಕೇವಲ ವಾರ್ಷಿಕ 1.6 ಕೋಟಿ ರೂಪಾಯಿಗಳ ಆದಾಯಕ್ಕಾಗಿ ಇಡೀ ಬೆಂಗಳೂರಿಗರ ಉಳಿತಾಯದ ಹಣವನ್ನು ಪಾರ್ಕಿಂಗ್ ಮಾಫಿಯಾಗಳಿಗೆ ನೀಡುವಂತ ದುರವಸ್ಥೆ ತಲೆದೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರಿಗರು ಎಲ್ಲೆಂದರಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ಮಾಡುತ್ತಾರೆಂಬ ಕುಂಟು ನೆಪವನ್ನು ಹೇಳಿ, ಡಿ.ಕೆ. ಶಿವಕುಮಾರ್ ತಮ್ಮ ಬೆಂಬಲಿಗರ ಉದ್ದಾರಕ್ಕಾಗಿ ಈ ನಿಲುವನ್ನು ತಾಳಿರುವುದು ಬೆಂಗಳೂರಿಗರು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕೂಡಲೇ ಬೆಂಗಳೂರಿನ ಸಂಚಾರ ದಟ್ಟಣೆ, ಪಾರ್ಕಿಂಗ್ ಹಾಗೂ ಇನ್ನಿತರ ಸಮಸ್ಯೆಗಳನ್ನು ಸರಿಪಡಿಸಲು ವಿಶೇಷ ಸಂಚಾರ ಪೊಲೀಸ್ ಆಯುಕ್ತರನ್ನು ಮರು ನಿಯುಕ್ತಿ ಗೊಳಿಸಬೇಕು.
ಸಂಚಾರ ವಿಭಾಗದ ಪೊಲೀಸರು ನಿರಂತರ ರಸ್ತೆಗಳಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತಹ ವಾತಾವರಣ ಮೂಡಬೇಕು. ಈಗಾಗಲೇ ಸರ್ಕಾರಗಳ ಬ್ರಷ್ಟಾಚಾರ ನೀತಿಯಿಂದಾಗಿ ಬೆಂಗಳೂರು ನಗರವು ವಿಶ್ವದಲ್ಲಿಯೇ ಕುಖ್ಯಾತಿಯನ್ನು ಪಡೆದಿದೆ,ಇದರಿಂದ ಕೂಡಲೇ ಹೊರಬರಬೇಕಾಗಿದೆ ಎಂದು ಹೇಳಿದರು.
ಸರ್ಕಾರವು ನೇರವಾಗಿ ಜನಸಾಮಾನ್ಯನ ಜೇಬಿಗೆ ಕತ್ತರಿ ಹಾಕುವಂತಹ ದುರುಳ ಪಾರ್ಕಿಂಗ್ ನೀತಿಯನ್ನು ಜಾರಿಗೊಳಿಸುವುದನ್ನು ನಿಲ್ಲಿಸಬೇಕು ಎಂದು ಡಾ. ಸತೀಶ್ ಕುಮಾರ್ ಅಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ವಿವಿಧ ಪಾಲಿಕೆಗಳ ವ್ಯಾಪ್ತಿಯ ಪಕ್ಷದ ಮುಖ್ಯಸ್ಥರಾದ ಅಶೋಕ್ ಮೃತ್ಯುಂಜಯ, ಶಶಿಧರ್ ಆರಾಧ್ಯ, ಮರಿಯ ಹುಸೇನ್, ಮುನೇಶ್ ಕುಮಾರ್ , ಉಮೇಶ್, ಬಾಬು, ಪಿಳ್ಳೆ ಗೌಡ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
