ಮೈಸೂರು: ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ದ್ರೋಹ ಮತ್ತೆ ಸಾಬೀತಾಗಿದೆ. 3ನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾದರೂ ತಮ್ಮ ಬುಡಕ್ಕೆ ಕುತ್ತು ಬರುತ್ತದೆ ಎಂಬ ಕಾರಣಕ್ಕೆ ಹೆಚ್ಚು ಅನುದಾನವನ್ನ ಆಂಧ್ರ, ಬಿಹಾರಕ್ಕೆ ಕೊಟ್ಟು ಕರ್ನಾಟಕಕ್ಕೆ ದ್ರೋಹ ಬಗೆದಿದ್ದಾರೆ ಎಂದು
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ದೂರಿದ್ದಾರೆ.
ಬಿಜೆಪಿಗರಿಗೆ ಸಿದ್ದ ರಾಮಯ್ಯ ಸರ್ಕಾರದ ಬಗ್ಗೆ ಮಾತನಾಡುವ ಯಾವ ನೈತಿಕತೆಯಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಎನ್ಡಿಎ ಸರ್ಕಾರ ರಚನೆಗೆ ಸಾಥ್ ಕೊಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ಕೇಂದ್ರ ಸರ್ಕಾರ ಈ ಅವಧಿಯಲ್ಲಿ ಆಂಧ್ರ, ಬಿಹಾರಕ್ಕೆ ತಲಾ 1 ಲಕ್ಷ ಕೋಟಿಗೂ ಅಧಿಕ ಅನುದಾನ ಕೊಟ್ಟಿದೆ. ಆದರೆ ಕರ್ನಾಟಕದಿಂದ 17 ಬಿಜೆಪಿ ಸಂಸದರನ್ನ ಕೊಟ್ಟಿದ್ದರೂ, 17 ತಿಂಗಳಲ್ಲಿ ಕೇವಲ 3,432 ಕೋಟಿ ಮೊತ್ತದ 2 ಯೋಜನೆಗಳಿಗಷ್ಟೇ ಅನುಮೋದನೆ ಕೊಟ್ಟಿದೆ.
ಅದರಲ್ಲೂ 3ನೇ ಹಂತದ ಮೆಟ್ರೋ ಯೋಜನೆಯ ಬಹುಪಾಲು ಅನುದಾನ ರಾಜ್ಯ ಸರ್ಕಾರವೇ ಭರಿಸಿದೆ. ಸಾಲದ್ದಕ್ಕೆ ವಿತ್ತ ಸಚಿವರನ್ನ ಕರ್ನಾಟಕದಿಂದ ಆಯ್ಕೆ ಮಾಡಲಾಗಿದೆ.
ಹಾಗಿದ್ದರೂ ಬಿಜೆಪಿ ಸಂಸದರು ತನ್ನದೇ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಸೊಲ್ಲೆತ್ತದಿರುವುದು ನಾಚಿಗೇಡಿನ ಸಂಗತಿ ಎಂದು ಸುಬ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆದಮೇಲೆ ಬಿಜೆಪಿ ಒಂದೊಂದು ಕಿತಾಪತಿ ಮಾಡುತ್ತಲೇ ಇದೆ. ಮನರೆಗ ಹೆಸರು ಬದಲಾವಣೆ ಮಾಡಿ ಮಹಾತ್ಮ ಗಾಂಧಿಗೆ ಅಪಮಾನ ಮಾಡಿತು. ನರೇಗಾ ಅನುದಾನ ಕಡಿತಗೊಳಿಸಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಮಾಡಿತು. ಅಧಿವೇಶನದಲ್ಲಿ ದೆಹಲಿ ವಾಯುಮಾಲಿನ್ಯ ನಿಯಂತ್ರಿಸಲು ಒಟ್ಟಾಗಿ ಕೆಲಸ ಮಾಡೋಣ ಅಂತ ರಾಹುಲ್ ಗಾಂಧಿ ಅವರು ಹೇಳಿದಾಗ ಮೋದಿಗೆ ಬಾಯೇ ಬರಲಿಲ್ಲ. ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ.
ಅದರ ಬಗ್ಗೆ ಒಂದೂ ಮಾತಿಲ್ಲ, ಭಾರತ-ಪಾಕ್ ಕದನ ವಿರಾಮದ ಬಗ್ಗೆ ಚೀನಾ ಹೇಳಿಕೆ ಕೊಟ್ಟರೂ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಾರೆ. ಈಗ ಮತ್ತೆ ಮೆಟ್ರೋ ದರ ಏರಿಕೆ ಮಾಡಿ ರಾಜ್ಯದ ಜನರ ತಲೆ ಮೇಲೆ ಚಪ್ಪಡಿ ಎಳೆಯಲು ಕಾಯುತ್ತಿದ್ದಾರೆ. ಎಂದು ಆರೋಪಿಸಿದರು.
ಕೇಂದ್ರದ ಅನ್ಯಾಯಗಳು ಸಾಲು ಸಾಲಾಗಿ ಕಣ್ಣಿಗೆ ಬೀಳುತ್ತಿದ್ದರೂ ಇಲ್ಲಿನ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಸಣ್ಣ ಸಣ್ಣ ವಿಚಾರಗಳನ್ನ ತೆಗೆದುಕೊಂಡು ಕೋಮುದ್ವೇಷ ಸೃಷ್ಟಿಸಿ ರಾಜ್ಯದ ಶಾಂತಿ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿಯವರಿಗೆ ಈಗಲಾದರೂ ಮನಃಸಾಕ್ಷಿ ಇದ್ದರೆ ತಮ್ಮ ಕೇಂದ್ರದ ನಾಯಕರನ್ನ ಪ್ರಶ್ನೆ ಮಾಡಿ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಿರಿ. ಈ ಬಾರಿ ಬಜೆಟ್ನಲ್ಲಾದ್ರೂ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲನ್ನೂ ತನ್ನಿ, ಭಾವನೆಗಳ ಮೇಲೆಯೇ ರಾಜಕಾರಣ ಮಾಡೋದು ಬಿಡಿ ಎಂದು ಸುಬ್ರಮಣ್ಯ ಸಲಹೆ ನೀಡಿದ್ದಾರೆ.
