ಮೈಸೂರು: ಅಷಾಢ ಮಾಸದ ವಿಶೇಷ ಪೂಜೆಗೆ ಹಾಗೂ ತಾಯಿ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರಲಿದ್ದು ಕ್ಷಣಗಣನೆ ಪ್ರಾರಂಭ ಪ್ರಾರಂಭವಾಗಿದೆ.
ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ನಂತರ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಸಲಹೆ ಗಳನ್ನು ನೀಡಿದರು
ನಂತರ ಮಾತನಾಡಿದ ಅವರು,ಆಷಾಢ ಶುಕ್ರವಾರಗಳು ಮತ್ತು ಚಾಮುಂಡೇಶ್ವರಿ ದೇವಿಯ ವರ್ಧಂತಿ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ಭಕ್ತರ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ಜುಲೈ 17, 24, 31 ಮತ್ತು ಆಗಸ್ಟ್ 7 ರಂದು 4 ಅಷಾಢ ಶುಕ್ರವಾರಗಳು ಜರುಗಲಿವೆ. ಆಗಸ್ಟ್ 4 ರಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ಆಚರಣೆ ನಡೆಯಲಿದೆ ಎಂದು ಡಿಸಿ ಹೇಳಿದರು.
ಅಷಾಢದ 4 ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಲಲಿತ ಮಹಲ್ ಹೆಲಿಪ್ಯಾಡ್, ಕೆ.ಎಸ್.ಆರ್.ಟಿ.ಸಿ ನಗರ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಕ್ಕೆ ಬಸ್ ಸಂಚಾರ ಆರಂಭವಾಗಲಿದೆ. ರಾತ್ರಿ 8.30 ಕ್ಕೆ ಕೊನೆಯ ಬಸ್ ಇರಲಿದೆ ಎಂದು ತಿಳಿಸಿದರು.
ಬೆಟ್ಟದ ಪಾದದಿಂದ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಬೆಳಿಗ್ಗೆ 5 ಗಂಟೆಯ ನಂತರ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಸಾರ್ವಜನಿಕರು ಬೆಳಿಗ್ಗೆ 5 ಗಂಟೆಗೆ ಮೊದಲು ಬಂದು ಕಾಯುವುದು ಬೇಡ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಚಾಮುಂಡಿ ಬೆಟ್ಟದ ಮೇಲೆ ಯಾವುದೇ ಚಪ್ಪಲಿ ಸ್ಟಾಂಡ್ ವ್ಯವಸ್ಥೆ ಇರುವುದಿಲ್ಲ. ಭಕ್ತರು ಲಲಿತ ಮಹಲ್ ಹೆಲಿಪ್ಯಾಡ್ ಮತ್ತು ನಗರ ಬಸ್ ನಿಲ್ದಾಣದಲ್ಲಿ ಇರುವ ಚಪ್ಪಲಿ ಸ್ಟಾಂಡ್ ಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿ.ಐ.ಪಿ ದರ್ಶನ ಮತ್ತು ವಾಹನ ನಿರ್ಬಂಧ
ಶಿಷ್ಟಾಚಾರದಡಿ ಬರುವ ಗಣ್ಯರು, ವಿ.ಐ.ಪಿ ಗಳಿಗೆ ಬೆಳಿಗ್ಗೆ 5.30 ರಿಂದ 10 ಗಂಟೆಯವರೆಗೆ ಮಾತ್ರ ದರ್ಶನಕ್ಕೆ ಅವಕಾಶ. ಬೆಳಿಗ್ಗೆ 10 ಗಂಟೆಯ ನಂತರ ಎಲ್ಲಾ ಗಣ್ಯರ ವಾಹನಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಷಾಢ ಶುಕ್ರವಾರ ಮತ್ತು ವರ್ಧಂತಿ ದಿನಗಳಂದು ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ಸಂಪೂರ್ಣ ನಿಷೇಧವಿರುತ್ತದೆ, ಡ್ಯೂಟಿ ಪಾಸ್ ಹೊಂದಿರುವ ವಾಹನಗಳಿಗೆ ಮಾತ್ರ ಅವಕಾಶ ಇರುತ್ತದೆ ಎಂದು ಹೇಳಿದರು.
ಸಾರ್ವಜನಿಕ ದರ್ಶನ ಮತ್ತು 2000 ರೂಪಾಯಿ ವಿಶೇಷ ದರ್ಶನದ ಸರತಿ ಸಾಲುಗಳ ಮೇಲುಸ್ತುವಾರಿಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು. ನಗರ ಪೊಲೀಸ್ ಉಪ ಆಯುಕ್ತರು, ಕೆ.ಎಸ್.ಆರ್.ಟಿ.ಸಿ ಜಿಲ್ಲಾ ನಿಯಂತ್ರಣಾಧಿಕಾರಿ ಮತ್ತು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸೇರಿದಂತೆ 3 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.
ಸರದಿ ಸಾಲಿನಲ್ಲಿ ನೂಕು ನುಗ್ಗಲು ಆಗದಂತೆ ನೋಡಿಕೊಳ್ಳುವಂತೆ ಮತ್ತು 2000 ರೂಪಾಯಿ ಟಿಕೆಟ್ ಇಲ್ಲದವರು ಆ ಸಾಲಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಅಗತ್ಯವಿರುವ ಕಡೆ ಮೊಬೈಲ್ ಶೌಚಾಲಯ, ಕಸದ ಬುಟ್ಟಿ ಮತ್ತು ಸರತಿ ಸಾಲಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತರೆಡ್ಡಿ ತಿಳಿಸಿದರು.
ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ನಗರ ಪೊಲೀಸ್ ಉಪ ಆಯುಕ್ತರಾದ ಹರ್ಷ ಪ್ರಿಯಾವರ್ಧನ, ಡಿಸಿಪಿ ಸುಂದರ್ ರಾಜ್, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.
