ಬೆಂಗಳೂರು: ಬಡ ಆಟೋ ಚಾಲಕರ ಕುಟುಂಬಗಳಿಗೆ ಕೂಡಲೇ ಸಹಾಯ ಧನ ಬಿಡುಗಡೆ ಮಾಡ ಬೇಕೆಂದು ಒತ್ತಾಯಿಸಿ, ಆಮ್ ಆದ್ಮಿ ಪಕ್ಷದ ಕಾರ್ಯ ಕರ್ತರು ಬೆಂಗಳೂರಿನಲ್ಲಿ ಆಟೋಗಳಿಗೆ ಹಗ್ಗ ಕಟ್ಟಿ ಎಳೆದು ವಿನೂತನ ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ಆಟೋ ಘಟಕದ ಅಧ್ಯಕ್ಷ ಆಯುಬ್ ಖಾನ್ ಮಾತನಾಡುತ್ತಾ ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ನಗರದಲ್ಲಿ ಕೊಲ್ಲಿ ಯುದ್ಧದ ಪರಿಣಾಮದಿಂದ ಎಲ್ ಪಿ ಜಿ ಬಂಕ್ ಗಳಲ್ಲಿ ಸಾಕಷ್ಟು ಅನಿಲ ಕೊರತೆ ಉಂಟಾಗಿದೆ,ಇದರಿಂದಾಗಿ
ಆಟೋ ಚಾಲಕರ ಪ್ರತಿ ದಿನದ ದುಡಿಮೆಗೆ ಕೊಡಲಿ ಏಟು ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚಾಲಕರುಗಳು ದೈನಂದಿನ ತಮ್ಮ ಸಂಸಾರಗಳನ್ನು ನಡೆಸಲಾಗದೆ ಬೀದಿಗೆ ಬೀಳುತ್ತಿದ್ದಾರೆ. ಈ ದುಸ್ಥಿತಿಯಲ್ಲಿ ರಾಜ್ಯ ಸರ್ಕಾರ ಉಪಚುನಾವಣೆ ಹಾಗೂ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯದಲ್ಲಿ ಆಟೋ ಚಾಲಕರುಗಳ ಸಂಕಷ್ಟಗಳನ್ನು ಅರಿಯದೆ ಕಣ್ಮುಚ್ಚಿ ಕುಳಿತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನೇಕ ಸಮಾಜ ಸೇವಕರು, ಚಿತ್ರನಟರು ಮುಂದೆ ಬಂದು ತಮ್ಮ ಕೈಲಾದಷ್ಟು ಚಾಲಕರುಗಳಿಗೆ ನೆರವನ್ನು ನೀಡುತ್ತಿದ್ದಾರೆ. ಆದರೆ ಸರ್ಕಾರ ಇತ್ತ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶದಿಂದ ನುಡಿದರು.
ಅನೇಕ ಆಟೋ ಸಂಘಟನೆಗಳು ಮನವಿ ನೀಡಿದ್ದಾರೆ ಹಾಗೂ ಪ್ರತಿಭಟನೆಯನ್ನು ಮಾಡಿದ್ದಾರೆ. ಆದರೂ ಸರ್ಕಾರದ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳಿಗೆ ಕಣ್ಣು, ಕಿವಿ ಕೇಳಿಸದಂತಾಗಿದೆ. ಕೂಡಲೇ ಸಂಕಷ್ಟದಲ್ಲಿರುವ ಈ ಆಟೋ ಚಾಲಕ ವರ್ಗಕ್ಕೆ15000 ರೂ. ಸಹಾಯ ಧನವನ್ನು ಬಿಡುಗಡೆ ಮಾಡಬೇಕು,ಈ ಮೂಲಕ ಲಕ್ಷಾಂತರ ಆಟೋ ಚಾಲಕ ಕುಟುಂಬಗಳಿಗೆ ನೆರವಾಗಬೇಕು ಎಂದು ಆಯೂಬ್ ಖಾನ್ ಒತ್ತಾಯಿಸಿದರು.
ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಲುಪಿಸಿದ್ದೇವೆ. ಈ ಬಗ್ಗೆ ಸರ್ಕಾರ ಕ್ಯಾರೆ ಅನ್ನುತ್ತಿಲ್ಲ ಎಂದು ಕಿಡಿಕಾರಿದರು.
ಈ ಸರ್ಕಾರ ಕಾಳಸಂತೆ ಕೋರರಿಗೆ ಕೋಟ್ಯಾಂತರ ಹಣವನ್ನು ಲೂಟಿ ಮಾಡುವುದಕ್ಕೆ ಬಿಟ್ಟು ಕಣ್ಮುಚ್ಚಿ ಕುಳಿತಿದೆ. ಯಾರ ಮೇಲೂ ಇದುವರೆಗೆ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರದ ತೂಕ ಮತ್ತು ಮಾಪನ ಇಲಾಖೆಯ ಅಧಿಕಾರಿಗಳು ಹಗಲು ದರೋಡೆಗೆ ಇಳಿದಿರುವುದು ಸರ್ಕಾರದ ದಿವಾಳಿ ತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಾಪ್ರಹಾರ ನಡೆಸಿಸರು
ಸರ್ಕಾರದ ಈ ರೀತಿಯ ಬೇಜವಾಬ್ದಾರಿ ಹಾಗೂ ನಿರ್ಲಜ್ಜ ಧೋರಣೆಯಿಂದ ಚಾಲಕರುಗಳು ಬೀದಿಗಿಳಿದು ಹೋರಾಟ ಮಾಡುವಂತಹ ಸಂದರ್ಭ ಬಂದಿದೆ. ಲಕ್ಷಾಂತರ ಆಟೋ ಚಾಲಕ ವರ್ಗಗಳ ಕೋಪಕ್ಕೆ ಗುರಿಯಾಗಿ ಮುಂದಿನ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವುದು ಗ್ಯಾರಂಟಿ ಎಂದು ಸೀತಾರಾಮ್ ಗುಂಡಪ್ಪ ಎಚ್ಚರಿಸಿದರು.
ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರ ಸಹಾಯಧನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಆಟೋ ಸಂಘಟನೆಗಳ ಮುಖಂಡರು ಭಾಗವಹಿಸಿ ತಮ್ಮ ಸಹಮತವನ್ನು ವ್ಯಕ್ತಪಡಿಸಿದರು.
ಪಕ್ಷದ ಮುಖಂಡರುಗಳಾದ ಜಗದೀಶ್ ಚಂದ್ರ, ಲಕ್ಷ್ಮಿಕಾಂತ್ ರಾವ್, ಜಗದೀಶ್ ವಿ ಸದಂ, ಸಂಚಿತ್ ಸೆಹ್ವಾನಿ, ಉಷಾ ಮೋಹನ್, ಪುಟ್ಟಣ್ಣ ಗೌಡ, ಇರ್ಶಾದ್, ಶಶಿಧರ್ ಆರಾಧ್ಯ, ಮುನೇಶ್ ಕುಮಾರ್, ಚೆನ್ನಪ್ಪ ಗೌಡ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
