ಬೆಂಗಳೂರು: ಜನಾಕ್ರೋಶ ಭುಗಿಲೇಳುವ ಮುನ್ನ ಜಿಬಿಎಗೆ ಚುನಾವಣೆ ನಡೆಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
2020 ರಿಂದ ಬೆಂಗಳೂರಿಗೆ ಸ್ಥಳೀಯ ವಾರ್ಡ್ ಮಟ್ಟದ ಚುನಾಯಿತ ಪ್ರತಿನಿಧಿಗಳೇ ಇಲ್ಲ, ಬೆಂಗಳೂರಿನ ನಾಗರಿಕರು ಸಾಕಷ್ಟು ಸಮಸ್ಯೆಗಳಿಂದ ಪರಿತಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಕೂಡಲೇ ಜನಾಕ್ರೋಶ ಭುಗಿಲೇಳುವ ಮುನ್ನ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೂಡಲೇ ಚುನಾವಣೆಯನ್ನು ನಡೆಸಬೇಕೆಂದು ಆಮ್ ಆದ್ಮಿ ಪಕ್ಷ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ ಆಗ್ರಹಿಸಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್ ಮಾತನಾಡಿ, ಅಂದಿನ ಬಿಜೆಪಿ ಸರ್ಕಾರವು ಬಿಬಿಎಂಪಿ ಚುನಾವಣೆಯನ್ನು ಮುಂದೂಡಲು ನಾನಾ ಕಸರತ್ತನ್ನು ನಡೆಸಿತ್ತು. ಕೆ ಎಂ ಸಿ ಕಾಯ್ದೆಯನ್ನೇ ರದ್ದುಪಡಿಸಿ ಬಿಬಿಎಂಪಿ 2020 ಕಾಯ್ದೆಯನ್ನು ರಚಿಸುವ ಮೂಲಕ ಆಡಳಿತಾಧಿಕಾರಿಗಳನ್ನು ನೇಮಿಸಿ ಸಾಕಷ್ಟು ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಇಬ್ಬರು ಪಾಲಿಕೆ ಸದಸ್ಯರು ನ್ಯಾಯಾಲಯದ ಮೊರೆ ಹೋಗಿದ್ದರು. 6 ವರ್ಷಗಳ ನಂತರ ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು ಇದೇ ವರ್ಷದ ಜೂನ್ 30ರ ಒಳಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದೆ.
ಇದರ ನಡುವೆ ಕಾಂಗ್ರೆಸ್ ಸರ್ಕಾರ ಕೂಡಾ ಬೆಂಗಳೂರು ಮಹಾನಗರ ಪಾಲಿಕೆಯನ್ನು 5 ಭಾಗಗಳಾಗಿ ವಿಭಜಿಸಿ ಅಧಿಕಾರ ವಿಕೇಂದ್ರೀಕರಣದ ಸಂವಿಧಾನದ ಮೂಲ ಆಶಯವನ್ನೇ ಬುಡಮೇಲು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಜಿಬಿಎ ನಗರಪಾಲಿಕೆಗಳ ಆಡಳಿತದಲ್ಲಿ ಮುಖ್ಯಮಂತ್ರಿಗಳು ಪ್ರಭಾವಿ ಮಂತ್ರಿಗಳು, ಶಾಸಕರು ನೇರ ಹಸ್ತಕ್ಷೇಪ ಉಂಟು ಮಾಡುವ ಮೂಲಕ ಸಂವಿಧಾನದ ಮೂಲ ಆಶಯವನ್ನೇ ಬುಡ ಮೇಲು ಮಾಡಿದೆ. ಹೀಗಿದ್ದರೂ ಸಹ ಬೆಂಗಳೂರಿನ ನಾಗರಿಕರಿಗೆ ಸ್ಥಳೀಯ ಚುನಾವಣಾ ಪ್ರತಿನಿಧಿಗಳನ್ನು ನೇಮಿಸಿಕೊಳ್ಳುವ ಸಾಂವಿಧಾನಿಕ ಅಧಿಕಾರಕ್ಕೆ ಕೊಡಲಿ ಪೆಟ್ಟು ನೀಡಲು ಅನೇಕ ಕಾರಣಗಳನ್ನು ನೀಡುತ್ತಿರುವ ಕಾಂಗ್ರೆಸ್ ಸರ್ಕಾರವು ಚುನಾವಣೆಯನ್ನು ಮುಂದೂಡಲು ಹವಣಿಸುತ್ತಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಕೂಡಲೇ ಚುನಾವಣೆಯನ್ನು ನಡೆಸಿ ಸಮಸ್ಯೆಗಳ ಕೂಪವಾಗಿರುವ ಬೆಂಗಳೂರನ್ನು ಮುಕ್ತಗೊಳಿಸಬೇಕು ಎಂದು ಸತೀಶ್ ಕುಮಾರ್ ಆಗ್ರಹಿಸಿದರು.
ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ, ದೇಶದಲ್ಲಿಯೇ ಆರ್ಥಿಕ ಇಂಜಿನ್ ಆಗಿ ಐಟಿ ಬಿಟಿ ಕ್ಷೇತ್ರದಲ್ಲಿ ತನ್ನದೇ ಆದ ವಿಶ್ವ ಮಾನ್ಯತೆಯನ್ನು ಪಡೆದಿರುವ ಬೆಂಗಳೂರು ನಗರದ ನಾಗರಿಕರು ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಬೆಂಗಳೂರಿನ 27 ಶಾಸಕರು ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಇದುವರೆಗೂ ಸಾವಿರಾರು ಕೋಟಿ ಅಕ್ರಮಗಳನ್ನು ಮಾಡಿದ್ದಾರೆ. ಇವರುಗಳ ನುಂಗುಬಾಕತನಕ್ಕೆ ಚುನಾವಣೆಯನ್ನೇ ಮುಂದೂಡಲು ಹೊರಟಿರುವುದು ನಾಗರೀಕ ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಕೂಡಲೇ ಚುನಾವಣೆ ಘೋಷಿಸದಿದ್ದಲ್ಲಿ ಪಕ್ಷವು ಬೆಂಗಳೂರಿನ ನಾಗರೀಕರೊಂದಿಗೆ ಜೊತೆಗೂಡಿ ಮತ್ತೊಂದು ಜನಾಂದೋಲನಕ್ಕೆ ಮುನ್ನುಡಿ ಹಾಡುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಲಕ್ಷ್ಮಿಕಾಂತ್ ರಾವ್, ಶಶಿಧರ್ ಆರಾಧ್ಯ,ಉಷಾ ಮೋಹನ್ ,
ಶಿವರಾಮ್, ಪುಟ್ಟಣ್ಣ ಗೌಡ,
ಉಮೇಶ್ ಯಾದವ್, ದೇವರಸಂ, ನವೀನ್ ಅಯ್ಯರ್ ,ಮಧುಮಿತ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.
