ಬೆಂಗಳೂರು: ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 2.94 ಲಕ್ಷ ಉದ್ಯೋಗಗಳನ್ನು ಕೂಡಲೇ ತುಂಬಬೇಕೆಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನ ನಡೆಸಿದ ಆಪ್ ಸದಸ್ಯರು,
ಈಗಾಗಲೇ ಲೋಕ ಸೇವಾ ಆಯೋಗದಿಂದ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಮುಗಿದು ಆಯ್ಕೆಯಾಗಿರುವ ಉದ್ಯೋಗಾರ್ತಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲು ಸರ್ಕಾರ ಕೂಡಲೇ ಮುಂದಾಗ ಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಪಕ್ಷದ ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ ಮಾತನಾಡಿ, ರಾಜ್ಯದ 224 ಶಾಸಕರು ವ್ಯಾಪಕ ಭ್ರಷ್ಟಾಚಾರಗಳಲ್ಲಿ, ಕಮಿಷನ್ ದಂಧೆಗಳಲ್ಲಿ ನಿರತರಾಗಿರುವುದನ್ನು ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹೇಳುತ್ತಿದ್ದಾರೆ,ಇದರಿಂದಾಗಿ
ಸರ್ಕಾರದ ಮಂತ್ರಿ ಮಹೋದಯರು, ವ್ಯಾಪಕ ಭ್ರಷ್ಟಾಚಾರಗಳಲ್ಲಿ ನಿರತರಾಗಿರುವುದು ರಾಜ್ಯದ ಜನತೆಗೆ ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಇದರ ನಡುವೆ ಲಕ್ಷಾಂತರ ಯುವಕರು ಕಷ್ಟಪಟ್ಟು ಓದಿ ಪದವಿ ಪಡೆದುಕೊಂಡು ಸರ್ಕಾರದ ಉದ್ಯೋಗಕ್ಕೆ ಅನೇಕ ವರ್ಷಗಳ ಕಾಲ ಎಡತಾಕುತ್ತಿದ್ದಾರೆ. ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ತುಂಬುವುದಕ್ಕೆ ಯಾವುದೇ ಮನಸ್ಸು ಮಾಡದೆ ಕುಂಟು ನೆಪಗಳನ್ನು ಹೇಳಿಕೊಂಡು ಬರುತ್ತಿದೆ ಯುವಜನತೆಗೆ ವಯಸ್ಸು ಮೀರಿ ಉದ್ಯೋಗದ ಅವಕಾಶಗಳೇ ತಪ್ಪತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರ ಸಹ ಇದೇ ಚಾಳಿ ಅನುಸರಿಸಿಕೊಂಡು ಬಂದಿತ್ತು, ರಾಜ್ಯದ ಯುವಜನತೆ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಈಗಾಗಲೇ ತಮ್ಮ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ರಾಜ್ಯದ ಕಾನೂನು – ಸುವ್ಯವಸ್ಥೆ ಹದಗೆಡುವ ಮೊದಲು ಸರ್ಕಾರ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು ಹಾಗೂ ಈಗಾಗಲೇ ನೇಮಕವಾಗಿರುವ ಅಭ್ಯರ್ಥಿಗಳಿಗೆ ಉದ್ಯೋಗಗಳನ್ನು ನೀಡಲು ಮುಂದಾಗಬೇಕು ಎಂದು ಸೀತಾರಾಮ್ ಗುಂಡಪ್ಪ ಒತ್ತಾಯಿಸಿದರು.
ಆಮ್ ಆದ್ಮಿ ಪಕ್ಷ ಆಡಳಿತದಲ್ಲಿರುವ ಪಂಜಾಬ್ ರಾಜ್ಯದಲ್ಲಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿದೆ. ಇದೇ ಮಾದರಿಯನ್ನು ರಾಜ್ಯ ಸರ್ಕಾರವು ಸಹ ಅನುಸರಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ್ ರಾವ್ ಮಾತನಾಡಿ,ರಾಜ್ಯದ ಶಾಸಕರು ಕಗ್ಗೊಲೆ, ಲಂಚ ಪ್ರಕರಣಗಳಲ್ಲಿ ಜೈಲು ಪಾಲಾಗುತ್ತಿದ್ದಾರೆ. ಇಂತಹ ಸೆರೆಮನೆ ವಾಸ ಅನುಭವಿಸುವ ಶಾಸಕರು ಮಂತ್ರಿ ಮಹೋದಯರುಗಳಿಗೆ ಸರ್ಕಾರಿ ಉದ್ಯೋಗಿಗಳಿಗೆ ಇರುವ ಮಾನದಂಡದ ಅನುಸಾರ ಶಾಸಕತ್ವದ ಅಮಾನತು ಶಿಕ್ಷೆಯನ್ನು ನೀಡಲು ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಗುತ್ತಿಗೆದಾರರ ಸಂಘದಿಂದ ಎಲ್ಲ ಮಾಹಿತಿಗಳನ್ನು ತೆಗೆದುಕೊಂಡು ಕಮಿಷನ್ ದಂಧೆಯಲ್ಲಿ ನಿರತರಾಗಿರುವ ಶಾಸಕರನ್ನು ಹೆಡೆಮುರಿ ಕಟ್ಟಲು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ತಾಕತ್ ಇದೆಯೇ ಎಂದು ಪ್ರಶ್ನುಸಿದರು.
ತಮ್ಮ ಅವಧಿಯಲ್ಲಿ ಉದ್ಯೋಗವನ್ನೇ ನೀಡದ ಬಿಜೆಪಿಗರು ಇಂದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಉದ್ಯೋಗಾರ್ತಿಗಳ ಹೋರಾಟದಲ್ಲಿ ಚೀಮಾರಿ ಹಾಕಿಸಿಕೊಂಡು ಬಂದಿದ್ದಾರೆ. ಈಗಲಾದರೂ ತಮ್ಮ ನಕಲಿ ಹೋರಾಟಗಳನ್ನು ಬಿಜೆಪಿಗರು ಬಿಡಬೇಕು. ಕೇಂದ್ರ ಸರ್ಕಾರದಲ್ಲಿಯೂ ಖಾಲಿ ಇರುವ ಹುದ್ದೆಗಳನ್ನು ತುಂಬಲು ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ಸತೀಶ್ ಕುಮಾರ್, ರವೀಶ್ ದಾಸಪ್ಪ ,ಗೋಪಾಲ್, ಶಶಿಧರ್ ಆರಾಧ್ಯ, ಪುಟ್ಟಣ್ಣ ಗೌಡ, ಪುಷ್ಪ ಕೇಶವ್, ಉಮೇಶ್ ಯಾದವ್, ಕುದ್ರತ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
