ಬೆಂಗಳೂರು: ಭಾರತ ದೇಶವು ಗಾಂಧೀಜಿ ಸೇರಿದಂತೆ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯ ಪಡೆದರೂ ಇಂದಿಗೂ ಭ್ರಷ್ಟ ರಾಜಕಾರಣಿಗಳಿಂದ ಅತಂತ್ರರಾಗಿಯೇ ಉಳಿದಿದ್ದೇವೆ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದರು.
ಪ್ರಾಮಾಣಿಕ ರಾಜಕಾರಣದಲ್ಲಿ ವಕೀಲರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಭ್ರಷ್ಟಮುಕ್ತ,ಪಾರದರ್ಶಕ, ವಂಶ ಪಾರಂಪರ್ಯ ರಾಜಕಾರಣವನ್ನು ಹೊಡೆದೋಡಿಸಲು ಸಾಧ್ಯ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷ ಏರ್ಪಡಿಸಿದ್ದ ಜಿಬಿಎ ಚುನಾವಣೆಯಲ್ಲಿ ವಕೀಲರುಗಳ ಪಾತ್ರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಪರ್ಯಾಯ ರಾಜಕಾರಣ ವ್ಯವಸ್ಥೆಯನ್ನು ತರಲೇಬೇಕೆಂಬ ಮಹಾದಾಶೆಯಿಂದ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ ಮುಂಬರುವ ಎಲ್ಲಾ ನಗರ ಪಾಲಿಕೆಗಳ ಚುನಾವಣೆಗಳಲ್ಲಿ ವಕೀಲರುಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಾಗಿ, ಬೆಂಬಲಿಗರಾಗಿ, ಪೋಷಕರಾಗಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕಳೆದ ಹಲವು ದಶಕಗಳಿಂದ ಸಂಪೂರ್ಣ ಭ್ರಷ್ಟಾಚಾರದಿಂದ ಮುಳುಗಿ ಹೋಗಿರುವ ಬೆಂಗಳೂರು ಮಹಾನಗರ ಪಾಲಿಕೆಯು ನಾಗರಿಕರಿಗೆ ಬದುಕಲು ಸಾಧ್ಯವೇ ಆಗದಂತಹ ಪರಿಸ್ಥಿತಿಗೆ ತಳ್ಳಿದೆ ಎಂದು ದೂರಿದರು.
ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ವೈಫಲ್ಯಗೊಂಡು ಬೆಂಗಳೂರಿಗರು ಪ್ರಾಣ ಒತ್ತೆ ಇಟ್ಟು ಬದುಕುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಕೀಲರೆಲ್ಲ ಪ್ರಾಮಾಣಿಕ ಪಕ್ಷಗಳಲ್ಲಿ ಗುರುತಿಸಿಕೊಂಡು ಭ್ರಷ್ಟ ವ್ಯವಸ್ಥೆಯನ್ನು ಸರಿ ಮಾಡಬೇಕೆಂದು ಮುಖ್ಯ ಮಂತ್ರಿ ಚಂದ್ರು ಮನವಿ ಮಾಡಿದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ವಕೀಲ ಲಕ್ಷ್ಮಿಕಾಂತರಾವ್ ಮಾತನಾಡಿ, ಬೆಂಗಳೂರಿನ ವಕೀಲ ವರ್ಗ ಸದಾಕಾಲ ಭ್ರಷ್ಟರುಗಳೊಂದಿಗೆ ಕೋರ್ಟುಗಳಲ್ಲಿ ಸೆಣಸುತ್ತಾ ಬಂದಿದ್ದಾರೆ. ಇದೀಗ ಚುನಾವಣೆ ಕಣದಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಜನಸೇವೆಗೆ ಮುಂದಾಗಬೇಕೆಂದು ಕರೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಹಿರಿಯ ಮುಖಂಡರುಗಳು ಹಾಗು ವಕೀಲರುಗಳಾದ ನಂಜಪ್ಪ ಕಾಳೇಗೌಡ, ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್, ಮಹದೇವಸ್ವಾಮಿ, ಬಸವರಾಜ ಮುದಿಗೌಡರ್, ರವಿಕುಮಾರ್, ಉಷಾ ಮೋಹನ್, ಜ್ಯೋತಿಶ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.
