ಮೈಸೂರು,ನ.1: ಕನ್ನಡ ನಮ್ಮ ಮಾತೃಭಾಷೆ ಮಾತ್ರವಲ್ಲ, ಅದು ನಮ್ಮ ಇತಿಹಾಸ, ನಮ್ಮ ಸಂಸ್ಕೃತಿ ಮತ್ತು ನಮ್ಮ ಅಸ್ಮಿತೆ. ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ತಿಳಿಸಿದರು.
ನಗರದ ಓವಲ್ ಮೈದಾನದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ಭಾಷಣ ಮಾಡಿದ ಅವರು, ನವೆಂಬರ್ 1 ಕನ್ನಡಿಗರ ಪಾಲಿಗೆ ಕೇವಲ ಹಬ್ಬವಲ್ಲ, ನಮ್ಮ ಭಾಷೆಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುವ ಪವಿತ್ರ ದಿನ ಎಂದು ನುಡಿದರು.
1956ರ ನ.01 ರಂದು ವಿಶಾಲ ಮೈಸೂರು ರಾಜ್ಯ ರಚನೆ ಮತ್ತು 1973 ರ ನ.01 ರಂದು ಕರ್ನಾಟಕ ಎಂದು ಮರು ನಾಮಕರಣದ ಹಿಂದೆ ಆಲೂರು ವೆಂಕಟರಾವ್ ಸೇರಿದಂತೆ ಅನೇಕ ಮಹನೀಯರ ತ್ಯಾಗ, ಹೋರಾಟವಿದೆ ಎಂದು ಸ್ಮರಿಸಿದರು.
ಪಂಪ, ರನ್ನ, ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರಂತಹ ಮಹನೀಯರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮ ಹೆಗ್ಗಳಿಕೆ ಎಂದು ಸಚಿವರು ಬಣ್ಣಿಸಿದರು.
ಮೈಸೂರು ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ವಿವರಿಸಿದರು.
ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಜನನ-ಮರಣ ಪ್ರಮಾಣ ಪತ್ರ ಅಂಚೆ ಮೂಲಕ ಮನೆ ಬಾಗಿಲಿಗೆ ವಿತರಣೆ, ಪೂಜಾ ಸೇವಾ ವಿಶೇಷ ಇ-ಖಾತಾ ಅಭಿಯಾನದಲ್ಲಿ ಕೇವಲ ರೂ.175ಕ್ಕೆ 72 ಗಂಟೆಯಲ್ಲಿ 590 ಆಸ್ತಿಗಳಿಗೆ ಇ-ಖಾತಾ, ಇದುವರೆಗೆ 78,000 ‘ಎ’ ಮತ್ತು ‘ಬಿ’ ಖಾತಾ ವಿತರಣೆ, 210 ಕೋಟಿ ಆಸ್ತಿ ತೆರಿಗೆ ಸಂಗ್ರಹ, 30 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಚಾಲ್ತಿಯಲ್ಲಿವೆ ಎಂದು ಸಚಿವರು ತಿಳಿಸಿದರು.
ಕೊನೆಯಲ್ಲಿ ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ ಎಂದು ಹೇಳುತ್ತಾ ನಾಡಿನ ಸಮಸ್ತ ಜನತೆಗೆ 71ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಜಿಲ್ಲಾ ಉಸ್ತವಾರಿ ಸಚಿವರು ಕೋರಿದರು.
ಈ ಸಂಭ್ರಮಾಚರಣೆಯಲ್ಲಿ ಮೈಸೂರು ಜಿಲ್ಲಾಧಿಕಾರಿ, ಮೈಸೂರು ನಗರ ಪೊಲೀಸ್ ಆಯುಕ್ತರು, ಡಿಸಿಪಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪರ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಜಿಲ್ಲಾ ಮಟ್ಟದ ಎಲ್ಲಾ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
