ಬೆಂಗಳೂರು: ಕೇಂದ್ರ ಸರ್ಕಾರ ಕಬ್ಬು ಬೆಳೆಯುವ ರೈತರ ಬದುಕಿಸಲಾದರೂ ಸಕ್ಕರೆ ಕನಿಷ್ಠ ಮಾರಾಟ ದರ (ಎಂಎಸ್ ಪಿ)ವನ್ನು 50 ರೂ.ಗೆ ಹೆಚ್ಚಿಸಬೇಕು. ಹಾಗಾದರೆ ಮಾತ್ರ ರೈತರಿಗೆ ಒಳ್ಳೆಯ ಬೆಲೆ ನೀಡಲು ಸಾಧ್ಯ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ,
ಕಬ್ಬು ಬೇಳೆಗಾರರ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿ,ನಾನು ರೈತರಿಗೆ ಮನವಿ ಮಾಡುವುದು ಇಷ್ಟೇ. ದಯವಿಟ್ಟು, ಪ್ರತಿಭಟನೆ ಮಾಡಬೇಡಿ. ಆವತ್ತು ಮಾತು ಕತೆ ಏನಾಗಿತ್ತೋ ಅದನ್ನು ಪಾಲಿಸಿ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನಿಮಗೆ ಕಾರ್ಖಾನೆಗಳಿಂದ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ಈ ವಿಚಾರವಾಗಿ ಪ್ರಧಾನಿಗಳಿಗೆ ನಾನು ಪತ್ರ ಬರೆದಿದ್ದೇನೆ. ಇವತ್ತು ನಾಳೆಯಲ್ಲಿ ಕೇಂದ್ರದ ಮಂತ್ರಿಗಳನ್ನು ಸಂಪರ್ಕ ಮಾಡಿ ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ರೈತರೇ ನೀವು ಮಾಡುತ್ತಿರುವ ಹಠವನ್ನು ನಿಲ್ಲಿಸಿ. ಇದರಿಂದ ಕಬ್ಬು ಬೆಳೆಗಾರರು ಬದುಕಿರುವಾಗಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಬ್ಬು ಒಣಗಿದರೆ ರಸ ಕಡಿಮೆಯಾಗುತ್ತದೆ. ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಕಾರ್ಖಾನೆಗಳು ಕಬ್ಬನ್ನು ಅರೆಯಲಿ. ಕೇಂದ್ರ ಸರ್ಕಾರ ಸೆಪ್ಟೆಂಬರ್ ನಲ್ಲೇ ಕಬ್ಬು ಅರೆಸಿ ಎಂದು ಹೇಳಿತ್ತು. ನಾನು ರೈತರನ್ನು ಕರೆದು ಕೇಳಿದಾಗ, ಈಗ ಕಬ್ಬಿನಲ್ಲಿ ರಸ ಕಡಿಮೆ ಇದೆ ಅಂತ ಹೇಳಿದರು. ಈಗ ಕಬ್ಬು ಅರೆಯಲು ಸರಿಯಾದ ಕಾಲ. ರೈತರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.
“ಕಬ್ಬು ಬೆಳೆಗಾರರೊಂದಿಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದೇನೆ. ಆಗ ಕೇಂದ್ರ ಸರ್ಕಾರದ ಸೂಕ್ತ ಬೆಲೆ ನಿಗದಿ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ಜೋಶಿ ಅವರು ಮಾತುಕೊಟ್ಟಿದ್ದರಂತೆ. ಕೇಂದ್ರ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೋ ಅದನ್ನು ಪಾಲಿಸಬೇಕು ಎಂದು ರೈತ ಮುಖಂಡರ ಮಧ್ಯದಲ್ಲಿ ಕುಳಿತು ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದೆವು. ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿ ಸದಸ್ಯರಿಗೂ ಈ ವಿಚಾರ ಹೇಳಿದ್ದೇವೆ’ ವಿವರಣೆ ನೀಡಿದರು.
ಹಾಲಿನ ದರ 12ರೂಪಾಯಿ ಹೆಚ್ಚಿಸಿ ಎಂದು ಬೇಡಿಕೆ ಇಟ್ಟಿದ್ದರು. ಬೇರೆ ರಾಜ್ಯಗಳಲ್ಲಿ ಬೆಲೆ ಬಹಳ ಜಾಸ್ತಿ ಇದೆ. ಇಲ್ಲಿ ಉತ್ಪಾದನೆಯಾಗುತ್ತಿದ್ದ ಹಾಲು ಅಲ್ಲಿಗೆ ಹೋಗುತ್ತಿತ್ತು. ರಾಜ್ಯದಲ್ಲಿ ಬರಗಾಲ ಇರುವುದರಿಂದ ಹಾಲಿ ಉತ್ಪಾದನೆ ಕಡಿಮೆ ಆಗಿದೆ. ಹಾಲಿನ ಉತ್ಪಾದನೆ ಜಾಸ್ತಿಯಾಗಬೇಕಾದರೆ ಗೋವಿಗೆ ಉತ್ತಮ ಆಹಾರ ಕೊಡಬೇಕು. ಆಹಾರ ಕೊಡಬೇಕು ಅಂದರೆ ರೈತರ ಬಳಿ ದುಡ್ಡು ಇರಬೇಕು. ನಾವು ರೈತರನ್ನು, ಗೋ ಮಾತೆಯನ್ನು ಉಳಿಸಬೇಕು. ಆ ದೃಷ್ಟಿಯಿಂದ ಬಹಳ ಆಲೋಚನೆ ಮಾಡಿ. ಈ ಬೆಲೆ ಏರಿಕೆ ತೀರ್ಮಾನ ಮಾಡಿದ್ದೇವೆ’ ಎಂದು ಸಿಎಂ ಸ್ಪಷ್ಟಪಡಿಸಿದರು.
ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ-ಬದರಿನಾಥ್ ಮಾರ್ಗದ ‘ಹಾಥಿ ಪರ್ವತ’ ಪ್ರದೇಶದ ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತ ನಿಜಕ್ಕೂ ಗಾಬರಿ ಮೂಡಿಸಿದೆ. ಉತ್ತರಾಖಂಡ ಹಾಗೂ ದೆಹಲಿ ಸರ್ಕಾರಗಳೊಂದಿಗೆ ಮುಂದಿನ ಕ್ರಮಗಳ ಬಗ್ಗೆ ಮಾತನಾಡಿದ್ದೇನೆ. ಮೃತರ ಪಾರ್ತಿವ ಶರೀರ ತರಿಸುವ ಬಗ್ಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
