ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ೭೫೦ ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಯಶಸ್ವಿಯಾಗಿ ಕೋಟ್ಯಂತರ ಕನ್ನಡಿಗರ ಹೃದಯ ಗೆದ್ದಿರುವ ಕ್ಯಾಪ್ಟನ್ ಅಭಿಮನ್ಯು ಆನೆಗೆ ಈ ಬಾರಿಯ ಪ್ರತಿಷ್ಠಿತ ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಬೇಕೆಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷರಾದ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, “ಅಭಿಮನ್ಯು ಕೇವಲ ಒಂದು ಆನೆಯಲ್ಲ; ಅದು ಕರ್ನಾಟಕದ ಹೆಮ್ಮೆ ಮತ್ತು ಸಾಂಸ್ಕೃತಿಕ ವೈಭವದ ಪ್ರತೀಕ. ನಾಡಿನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುವಲ್ಲಿ ಹಾಗೂ ದಸರಾ ಮಹೋತ್ಸವವನ್ನು ಸಾಂಗವಾಗಿ ನೆರವೇರಿಸುವಲ್ಲಿ ಅಭಿಮನ್ಯುವಿನ ಕೊಡುಗೆ ಅನನ್ಯವಾದದ್ದು. ಹಾಗಾಗಿ, ಈ ಅಪೂರ್ವ ಜೀವಿಯ ಸೇವೆಯನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಭಿಮನ್ಯು ಕೇವಲ ಸಾಂಸ್ಕೃತಿಕ ಉತ್ಸವಕ್ಕೆ ಸೀಮಿತವಾಗಿಲ್ಲ. ಇಡೀ ಏಷ್ಯಾ ಖಂಡದಲ್ಲೇ ಅತ್ಯುತ್ತಮವಾಗಿ ತರಬೇತಿ ಪಡೆದ ‘ನಂಬರ್ 1 ಕುಮ್ಕಿ ಆನೆ’ ಎಂಬ ಖ್ಯಾತಿ ಪಡೆದಿದೆ. ಕರ್ನಾಟಕ ಅರಣ್ಯ ಇಲಾಖೆಯ ಅತ್ಯಂತ ನಂಬಿಕಸ್ಥ ಮತ್ತು ಧೈರ್ಯಶಾಲಿ ಆನೆಯಾಗಿರುವ ಅಭಿಮನ್ಯು, ನಾಡಿನಾದ್ಯಂತ ಸಾರ್ವಜನಿಕರಿಗೆ ಕಂಟಕವಾಗಿದ್ದ ನೂರಾರು ಪುಂಡಾನೆಗಳನ್ನು ಹಾಗೂ ನರಭಕ್ಷಕ ಹುಲಿಗಳನ್ನು ಸೆರೆಹಿಡಿಯುವ ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಯಶಸ್ವಿಯಾಗಿದೆ. ಜನ ಮತ್ತು ಜಾನುವಾರುಗಳ ಪ್ರಾಣ ರಕ್ಷಣೆ ಮಾಡುವಲ್ಲಿ ಈ ಗಜೇಂದ್ರ ತೋರಿರುವ ಧೈರ್ಯ, ಶೌರ್ಯ ಹಾಗೂ ಶಿಸ್ತು ಇಡೀ ದೇಶಕ್ಕೆ ಮಾದರಿಯಾಗಿದೆ.
ಕಲೆ, ಸಾಹಿತ್ಯ, ಸಮಾಜಸೇವೆಯಂತೆ ಪ್ರಾಣಿ ಸಂಕುಲದ ಮೂಲಕ ನಾಡಿಗೆ ಮತ್ತು ಪರಿಸರ ವ್ಯವಸ್ಥೆಗೆ ಸಲ್ಲಿಸಿರುವ ಅಪ್ರತಿಮ ಸೇವೆಯನ್ನು ಪರಿಗಣಿಸಿ, ನವೆಂಬರ್ ೧ರ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಭಿಮನ್ಯುವಿಗೆ ವಿಶೇಷವಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಬೇಕು.
ಅನೇಕ ವರ್ಷಗಳಿಂದ ನಾಡಿಗೆ ನಿರಂತರ ಸೇವೆ ಸಲ್ಲಿಸುತ್ತಾ ಬಂದಿರುವ ಅಭಿಮನ್ಯುವಿಗೆ ಸರ್ಕಾರವು ರಾಜ ಮರ್ಯಾದೆ ಯೊಂದಿಗೆ ಸೂಕ್ತ ವಿಶ್ರಾಂತಿ ಹಾಗೂ ವಿಶೇಷ ಆರೈಕೆಯ ಪ್ಯಾಕೇಜ್ ಘೋಷಿಸಬೇಕು.
ಕನ್ನಡ ಕ್ರಾಂತಿದಳದ ವತಿಯಿಂದ ಈಗಾಗಲೇ ದಸರಾ ಮಹೋತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಅಭಿಮನ್ಯು ಆನೆಗೆ ವಿಶೇಷ ವಿನ್ಯಾಸದ ಕಂಚಿನ ಗಂಟೆಯನ್ನು ಕೊಡುಗೆಯಾಗಿ ನೀಡಿ ಗೌರವಿಸಲಾಗಿದೆ. ಮುಖ್ಯಮಂತ್ರಿಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರಾಣಿ ಪ್ರೇಮ ಹಾಗೂ ನಾಡಿನ ಸಾಂಸ್ಕೃತಿಕ ಹಿರಿಮೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅಭಿಮನ್ಯುಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಇತಿಹಾಸ ನಿರ್ಮಿಸಬೇಕೆಂದು ತೇಜಸ್ವಿ ನಾಗಲಿಂಗ ಸ್ವಾಮಿ ಅವರು ನಾಡಿನ ಸಮಸ್ತ ಜನತೆಯ ಪರವಾಗಿ ಆಗ್ರಹಿಸಿದ್ದಾರೆ.
