ಬೆಂಗಳೂರು: ಮಾಜಿ ಪ್ರಧಾನಿ ಜವಹರಲಾಲ್ ನೆಹರೂ,ಇಂದಿರಾಗಾಂಧಿ ಕೂಡ ಹೇರದಂತಹ ನಿರ್ಬಂಧಗಳನ್ನು ಕಾಂಗ್ರೆಸ್ ಸರ್ಕಾರ ಆರ್ಎಸ್ಎಸ್ ಪಥ ಸಂಚಲನದ ಮೇಲೆ ಹೇರಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದರು.
ವಿಜಯದಶಮಿ ಅಂಗವಾಗಿ ಜಯನಗರದಲ್ಲಿ ಆಯೋಜಿಸಿದ್ದ ಪಥ ಸಂಚಲನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್,ಸರ್ಕಾರ ನಿರ್ಬಂಧ ಹೇರಿದರೂ ಕೂಡಾ ಎಲ್ಲ ಕಡೆ ಯಶಸ್ವಿಯಾಗಿ ಪಥ ಸಂಚಲನ ನಡೆದಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಈ ಬಾರಿ ಅನೇಕ ನಿರ್ಬಂಧಗಳನ್ನು ಹೇರಿದೆ. ಕೊನೆಯ ಸಮಯದವರೆಗೂ ಪಥ ಸಂಚಲನಕ್ಕೆ ಅನುಮತಿ ನೀಡಲು ಸತಾಯಿಸಲಾಗಿದೆ. ಮಾಜಿ ಪ್ರಧಾನಿಗಳಾದ ನೆಹರು ಹಾಗೂ ಇಂದಿರಾಗಾಂಧಿ ಕೂಡ ಹೀಗೆ ಮಾಡಲಿಲ್ಲ. ಕಿರುಕುಳದ ನಡುವೆಯೂ ಆರ್ಎಸ್ಎಸ್ನಿಂದ ವಿಜೃಂಭಣೆಯಿಂದ ಹಾಗೂ ಶಾಂತಿಯುತ ಪಥ ಸಂಚಲನ ನಡೆಸಲಾಗಿದೆ ಎಂದು ತಿಳಿಸಿದರು.
ಆರ್ಎಸ್ಎಸ್ಗೆ ಅನುದಾನ ಬರುತ್ತಿದೆ ಎಂದು ಆರೋಪ ಮಾಡುವುದಾದರೆ, ಕಾಂಗ್ರೆಸ್ಗೆ ಪಾಕಿಸ್ತಾನದಿಂದ, ಬಾಂಗ್ಲಾದೇಶದಿಂದ, ಅಮೆರಿಕದಿಂದ ಸಹಾಯಧನ ಬರುತ್ತಿದೆಯೇ ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದರು.
ಆರ್ಎಸ್ಎಸ್ ವಿದೇಶದಿಂದ ಹಣ ಕೇಳುವುದಿಲ್ಲ. ಕಾಕ್ರೋಚ್ ಜನತಾ ಪಾರ್ಟಿಯೊಂದಿಗೆ ಶಾಮೀಲಾದ ಕಾಂಗ್ರೆಸ್, ಹೊರದೇಶಗಳಿಂದ ಹಣ ಬರುವಂತೆ ಮಾಡಿ ಆ ಹಣವನ್ನು ತಾನೇ ಪಡೆದುಕೊಂಡಿದೆ. ಆ ರೀತಿ ಸಂಘ ಎಂದಿಗೂ ಮಾಡುವುದಿಲ್ಲ. ದೇಶಪ್ರೇಮವನ್ನು ಬೆಳೆಸುವ ಕೆಲಸವನ್ನು ಮಾತ್ರ ಸಂಘ ಮಾಡುತ್ತದೆ. ಭಾರತಮಾತೆಗೆ ಜೈ ಎನ್ನುವ, ವಂದೇಮಾತರಂ ಎನ್ನುವ ಪ್ರೇರಣೆಯನ್ನು ಸಂಘ ನೀಡುತ್ತದೆ. ಆರ್ಎಸ್ಎಸ್ ಬಗ್ಗೆ ಮಾತಾಡುವಾಗ ಸಚಿವ ಪ್ರಿಯಾಂಕ್ ಖರ್ಗೆ ಹುಷಾರಾಗಿರಬೇಕು ಎಂದು ಎಚ್ಚರಿಸಿದ ಅಶೋಕ, ಇದೇ ಮಾತನ್ನು ಮುಖ್ಯಮಂತ್ರಿಗಳಿಂದ ಹೇಳಿಸಲಿ ಎಲ್ಲದಕ್ಕೂ ಇವರೇ ಮಾತಾಡುತ್ತಾರೆ ಮುಖ್ಯಮಂತ್ರಿ ಮೌನ ವ್ರತ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.
ಕಳೆದ ನೂರು ವರ್ಷಗಳಿಂದ ಪ್ರತಿ ವಿಜಯಶಮಿಯ ಸಮಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಪಥ ಸಂಚಲನ ನಡೆಯುತ್ತಿದೆ. ಇದು ದೇಶಾದ್ಯಂತ ನಡೆಯುತ್ತಿದ್ದು, 50 ವರ್ಷಗಳಿಂದ ನಾನು ಸಂಘದ ಸ್ವಯಂಸೇವಕನಾಗಿ ಭಾಗವಹಿಸುತ್ತಿದ್ದೇನೆ. ಈ ಕುರಿತು ನನಗೆ ಬಹಳ ಹೆಮ್ಮೆ ಇದೆ. ಆರ್ಎಸ್ಎಸ್ ಎಂದರೆ ದೇಶಾಭಿಮಾನ ಬೆಳೆಸುವ ಹಾಗೂ ದೇಶಕ್ಕೆ ಸಂಕಷ್ಟ ಬಂದಾಗ ದೇಶದ ಜೊತೆ ನಿಲ್ಲುವ ಸಂಘಟನೆ ಎಂದು ತಿಳಿಸಿದರು.
