ಬೆಂಗಳೂರು: 2,000 ಕೊಟ್ಟು ಟಿಕೆಟ್ ಖರೀದಿಸಿದರೂ ಜನಸಾಮಾನ್ಯರಿಗೆ ದಸರಾ ವೀಕ್ಷಣೆಗೆ ಅವಕಾಶ ಸಿಗದಿರುವುದು ಸರ್ಕಾರದ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ನಾಡಹಬ್ಬದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದ ಜನರಿಗೆ ಇಂತಹ ಸಂಕಷ್ಟ ಎದುರಾಗಬೇಕೇ,ದಸರಾವನ್ನು ಸಮರ್ಪಕವಾಗಿ ನಿರ್ವಹಿಸಲು ಅಸಮರ್ಥವಾದ ಸರ್ಕಾರ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಜನರ ಅನುಕೂಲ, ಭದ್ರತೆ ಮತ್ತು ಸೌಲಭ್ಯಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸ್ವಪ್ರಚಾರ, ಅಧಿಕಾರದ ಅಹಂಕಾರ ಮತ್ತು ರಾಜಕೀಯ ಲಾಭದ ಲೆಕ್ಕಾಚಾರದಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಆಲಿಸುವ ವ್ಯವಧಾನವೂ ಇಲ್ಲ ಎಂದು ಜರಿದಿದ್ದಾರೆ.
ನಾಡಹಬ್ಬ ದಸರಾ ಜನರ ಹಬ್ಬವೇ ಹೊರತು, ಕಾಂಗ್ರೆಸ್ ಸರ್ಕಾರದ ಪ್ರಚಾರದ ವೇದಿಕೆಯಲ್ಲ, ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ, ವ್ಯವಸ್ಥಿತವಾಗಿ ದಸರಾ ಆಚರಣೆ ನಡೆಸಲು ಸಾಧ್ಯವಾಗದ ಸರ್ಕಾರದ ವೈಫಲ್ಯಕ್ಕೆ ಹೊಣೆ ಯಾರು ಎಂದು ಅಶೋಕ ಪ್ರಶ್ನಿಸಿದ್ದಾರೆ.
