ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ದಿನವಾದ ವಿಜಯದಶಮಿ ಆಚರಣೆ ಅಂಬಾ ವಿಲಾಸ ಅರಮನೆಯಲ್ಲಿ ಸಂಪ್ರದಾಯಬದ್ದವಾಗಿ ನೆರವೇರಿತು.
ಬೆಳಗ್ಗೆ ಶುಭ ಮುಹೂರ್ತದಲ್ಲಿ ಅರಮನೆಯ ಖಾಸಗಿ ದರ್ಬಾರ್ ಹಾಲ್ನಲ್ಲಿ ದೇವತಾ ಪೂಜೆ, ನವರಾತ್ರಿ ಪೂಜೆಯ ಕೊನೆಯ ದಿನದ ವಿಶೇಷ ಅಲಂಕಾರ ಪೂಜೆ ನೆರವೇರಿತು. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಪ್ರದಾಯದಂತೆ ರಾಜ ಉಡುಪು ಧರಿಸಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.
ವಿಜಯದಶಮಿಯ ಪ್ರಮುಖ ಆಕರ್ಷಣೆಯಾದ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ ಹಾಗೂ ಪಟ್ಟದ ಹಸುವಿನ ಆಗಮನವಾದ ನಂತರ ಅರಮನೆಯ ಆವರಣದಲ್ಲಿ ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ರಾಜವಂಶಸ್ಥ ಯದುವೀರ್ ಶಮಿ ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿದರು.ಇದು ವಿಜಯದಶಮಿಯ ಪ್ರಮುಖ ಸಂಪ್ರದಾಯವಾಗಿದ್ದು, ವಿಜಯದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಸಂಜೆ 4 ಗಂಟೆಗೆ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ರಾಜವಂಶಸ್ಥರು ಚಾಲನೆ ನೀಡಿದರು
ರಾಜ ಪರಂಪರೆಯ ಈ ಎಲ್ಲಾ ವಿಧಿ ವಿಧಾನಗಳನ್ನು ಕಣ್ತುಂಬಿಕೊಳ್ಳಲು ಅರಮನೆ ಆವರಣದಲ್ಲಿ ಸಾವಿರಾರು ಜನ ಸೇರಿದ್ದರು.
