ಚಾಮರಾಜನಗರ: ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಚಾಮರಾಜನಗರ ದಸರಾ ಮಹೋತ್ಸವ-2026ರ ಲಾಂಛನ ಬಿಡುಗಡೆಗೊಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವ-2026ರ ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ ರಚಿಸಲಾಗಿರುವ ವಿವಿಧ ಸಮಿತಿಗಳ ಅಧಿಕಾರಿಗಳನ್ನೊಳಗೊಂಡ ಸಿದ್ದತಾ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ದಸರಾ ಲಾಂಛನ ಬಿಡುಗಡೆ ಮಾಡಿದರು.
ಬಳಿಕ ದಸರಾ ಕಾರ್ಯಕ್ರಮ ಸಿದ್ದತೆಗಾಗಿ ರಚಿಸಲಾಗಿರುವ ಸಮಿತಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಸಚಿವರು, ಜಿಲ್ಲಾಕೇಂದ್ರದಲ್ಲಿ ಮೂರು ದಿನಗಳ ಕಾಲ ನಡೆಯುವ ದಸರಾ ಕಾರ್ಯಕ್ರಮ ನಿರ್ವಹಣೆಗಾಗಿ ರಚಿಸಲಾಗಿರುವ ಸ್ವಾಗತ ಸಮಿತಿ, ವೇದಿಕೆ, ಸಮಿತಿ, ಸ್ವಚ್ಚತಾ ಸಮಿತಿ ಸಾಂಸ್ಕೃತಿಕ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿರುವ ಜಿಲ್ಲಾಮಟ್ಟದ ಅಧಿಕಾರಿಗಳು ಅತ್ಯಂತ ಶಿಸ್ತು ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಅಕ್ಟೋಬರ್ 17ರಂದು ಬೆಳಿಗ್ಗೆ 10.40ರಿಂದ 11.30 ಗಂಟೆಯೊಳಗಿನ ಶುಭ ಸಮಯದಲ್ಲಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ನೇರವೇರಿಸುವ ಮೂಲಕ ಮೂರು ದಿನಗಳ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಎಲ್ಲಾ ಕಾರ್ಯಕ್ರಮಗಳ ಆಯೋಜನೆ ಅಚ್ಚುಕಟ್ಟಾಗಿ ಇರಬೇಕು. ಯಾವುದೇ ಲೋಪಗಳಾಗದಂತೆ ಎಲ್ಲಾ ಸಿದ್ದತಾ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.
ರೈತ ದಸರಾ, ಮಹಿಳಾ ದಸರಾ ಕಾರ್ಯಕ್ರಮಗಳಲ್ಲಿನ ವಿವಿಧ ಸ್ಪರ್ಧೆಗಳು ಹಾಗೂ ಪಾರಂಪರಿಕ ನಡಿಗೆ, ಮ್ಯಾರಥಾನ್ ಎಲ್ಲವೂ ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಬೇಕೆಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಟ್ಟಣದ ಪ್ರಮುಖ ರಸ್ತೆಗಳು, ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಕಟ್ಟಡಗಳಲ್ಲಿ ದೀಪಾಲಂಕಾರ ಮಾಡಬೇಕು. ಶಿಷ್ಟಾಚಾರ ಪ್ರಕಾರವೇ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಕಲಾಪ್ರಕಾರಗಳಿಗೂ ಆದ್ಯತೆ ನೀಡಬೇಕು ಉಸ್ತುವಾರಿ ಸಚಿವರು ತಿಳಿಸಿದರು.
ರೈತ ದಸರಾ ಅಂಗವಾಗಿ ರೈತರಿಗೆ ನಡೆಸಲಾಗುವ ಹಾಲು ಕರೆಯುವ ಸ್ಪರ್ಧೆ ಹಾಗೂ ಶ್ವಾನ ಪ್ರದರ್ಶನಕ್ಕಾಗಿ ನಿಗದಿತ ದಿನಕ್ಕಿಂತ ಹಿಂದಿನ ದಿನವೇ ಎಲ್ಲಾ ಸಿದ್ದತೆಗಳನ್ನು ಪೂರ್ಣಗೊಳಿಸಬೇಕು. ದಸರಾ ಕಾರ್ಯಕ್ರಮಗಳಿಗೆ ಆಗಮಿಸಿ ತಂಗುವ ಕಲಾವಿದರಿಗೆ ಊಟ, ಉಪಹಾರ, ವಸತಿ ವ್ಯವಸ್ಥೆ ಅಚ್ಚುಕಟ್ಟಾಗಿರಬೇಕು. ಆಹಾರ ಮೇಳಕ್ಕೆ ಆಹಾರ ಸುರಕ್ಷತಾ ಅಧಿಕಾರಿಗಳನ್ನು ಆಹಾರ ತಪಾಸಣೆಗೆ ನೇಮಿಸಬೇಕು. ಮಹಿಳಾ ದಸರಾ ಅಂಗವಾಗಿ ನಡೆಯುವ ವಿವಿಧ ಸ್ಪರ್ಧೆಗಳಿಗೆ ಸಿದ್ದತೆ ಪೂರ್ಣಗೊಳಿಸಬೇಕು ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಯುವ ಸಂಭ್ರಮದಲ್ಲಿ ಜಿಲ್ಲೆಯ ಎಲ್ಲಾ ಪೌಢಶಾಲೆ ಹಾಗೂ ಪದವಿಪೂರ್ವ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಮ್ಯಾರಥಾನ್ ಹಾಗೂ ಪಾರಂಪರಿಕ ನಡಿಗೆ ವ್ಯವಸ್ಥಿತವಾಗಿ ಆಯೋಜಿಸಬೇಕು. ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳು ಅನುಷ್ಠಾನಗೊಳಿಸುವ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನೊಳಗೊಂಡ ಸ್ತಬ್ದಚಿತ್ರಗಳನ್ನು ತಯಾರಿಸಬೇಕು. ಮೆರವಣಿಗೆಯಲ್ಲಿ ಜಿಲ್ಲೆಯ ಕಲಾತಂಡಗಳಲ್ಲದೆ ಇತರೆ ಜಿಲ್ಲೆಯ ಕಲಾತಂಡಗಳನ್ನು ನಿಯೋಜನೆ ಮಾಡಬೇಕೆಂದು ಸಚಿವ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ಜಿಲ್ಲಾಧಿಕಾರಿ ಶ್ರೀರೂಪ ಅವರು ಮಾತನಾಡಿ,ದಸರಾ ಕಾರ್ಯಕ್ರಮಗಳ ನಿರ್ವಹಣೆಗಾಗಿ ವಿವಿಧ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಈಗಾಗಲೇ ವಿವಿಧ ಸಮಿತಿಗಳ ಸಭೆ ನಡೆಸಿ ದಸರಾ ಕಾರ್ಯಕ್ರಮ ಆಯೋಜನೆಗೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ದಸರಾ ಮಹೋತ್ಸವ ಕಾರ್ಯಕ್ರಮದ ವ್ಯವಸ್ಥಿತ ಸಿದ್ದತೆಗಾಗಿ ಎಲ್ಲಾ ತಾಲೂಕುಗಳ ತಹಶೀಲ್ದಾರರನ್ನು ನಿಯೋಜಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಶ್ರೀಪತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ವಿ. ಪ್ರಿಯದರ್ಶಿನಿ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಎಂ.ಎನ್. ಶಶಿಧರ್, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಡಿ.ಸಿ. ಶೃತಿ, ಜಿಲ್ಲಾಮಟ್ಟದ ಅಧಿಕಾರಿಗಳು, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು, ಅಕ್ಟೋಬರ್ 17ರಂದು ಸಂಜೆ ಖ್ಯಾತ ಚಲನಚಿತ್ರ ನಟರಾದ ವಿ. ರವಿಚಂದ್ರನ್ ಅವರು ದಸರಾ ಉದ್ಘಾಟನೆ ನೆರವೇರಿಸುವರು. ರಾಜ್ಯಮಟ್ಟದ ಹೆಸರಾಂತ ಕಲಾವಿದರು ಹಾಗೂ ಜಿಲ್ಲೆಯ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗಿದೆ. ಇದೇ ಮೊದಲ ಬಾರಿಗೆ ದಸರಾ ಅಂಗವಾಗಿ ಹೆಲಿ ರೈಡ್ ಆಯೋಜಿಸಲಾಗುತ್ತಿದೆ,ಒಟ್ಟಾರೆ ವಿಭಿನ್ನ ಕಾರ್ಯಕ್ರಮಗಳ ಮೂಲಕ ದಸರಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.
